Rachin Ravindra India Vs Newzealand 1st Test: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಯುವ ಬ್ಯಾಟರ್ ರಚಿನ್ ರವೀಂದ್ರ ಭರ್ಜರಿ ಶತಕ ಸಿಡಿಸಿದ್ದಾರೆ. ಟೆಸ್ಟ್ ವೃತ್ತಿ ಜೀವನದ ಎರಡನೇ ಶತಕ ಸಿಡಿಸುವುದರ ಜೊತೆಗೆ ದಾಖಲೆ ಬರೆದಿದ್ದಾರೆ.
ಕಳೆದೊಂದು ದಶಕದಲ್ಲಿ ಭಾರತದ ನೆಲದಲ್ಲಿ ಯಾವೊಬ್ಬ ನ್ಯೂಜಿಲೆಂಡ್ ಆಟಗಾರರೂ ಶತಕ ಸಿಡಿಸಲು ಸಾಧ್ಯವಾಗಿಲ್ಲ. ಇದೀಗ 12 ವರ್ಷಗಳ ನಂತರ ರಚಿನ್ ರವೀಂದ್ರ ಭಾರತದಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ 2012 ರಲ್ಲಿ ಕೊನೆಯ ಬಾರಿಗೆ ನ್ಯೂಜಿಲೆಂಡ್ ಬ್ಯಾಟರ್ ರಾಸ್ ಟೇಲರ್ ಇದೇ ಮೈದಾನದಲ್ಲಿ ಶತಕ ಸಿಡಿಸಿದ್ದರು. ರಚಿನ್ 123 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 11 ಬೌಂಡರಿ ನೆರವಿನಿಂದ ಶತಕ ಪೂರೈಸಿದರು.
ಎರಡನೇ ಶತಕ:ರಚಿನ್ಗೆ ಇದು ಎರಡನೇ ಟೆಸ್ಟ್ ಶತಕವಾಗಿದೆ. ಇದಕ್ಕೂ ಮೊದಲು ಈ ವರ್ಷ ಫೆಬ್ರವರಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಚೊಚ್ಚಲ ಟೆಸ್ಟ್ ಶತಕವನ್ನು ಬಾರಿಸಿದ್ದರು. ಇದೀಗ ತವರಿನಿಂದ ಹೊರಗೆ ಮೊದಲ ಶತಕವಾಗಿದೆ.
ಚಿನ್ನಸ್ವಾಮಿ ಫೇವರಿಟ್: ಚಿನ್ನಸ್ವಾಮಿ ಮೈದಾನದಲ್ಲಿ ಬ್ಯಾಟಿಂಗ್ ಮಾಡಲು ರಚಿನ್ ಹೆಚ್ಚಾಗಿ ಇಷ್ಟ ಪಡುತ್ತಾರೆ. ಅದನ್ನು ಶತಕದ ಮೂಲಕ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಇದಕ್ಕೂ ಮುನ್ನ ಇದೇ ಮೈದಾನದಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲೂ ಶತಕ ಸಮೇತ 150 ರನ್ಗಳನ್ನು ಸಿಡಿಸಿದ್ದರು. ಇದಷ್ಟೇ ಅಲ್ಲದೇ ಐಪಿಎಲ್ನಲ್ಲೂ ಇದೇ ಮೈದಾನದಲ್ಲಿ ಅರ್ಧಶತಕ ಬಾರಿಸಿದ್ದರು.