ನವದೆಹಲಿ:ನಾಳೆಯಿಂದ (ಜನವರಿ 25) ಆರಂಭವಾಗಲಿರುವ ಇಂಗ್ಲೆಂಡ್- ಭಾರತ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ವಿವಾದವೊಂದು ಹುಟ್ಟಿಕೊಂಡಿದೆ. ಇಂಗ್ಲೆಂಡ್ನ ಯುವ ಸ್ಪಿನ್ನರ್ ಶೋಯೆಬ್ ಬಶೀರ್ಗೆ ವೀಸಾ ವಿಳಂಬ ಕಾರಣಕ್ಕೆ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇದರ ವಿರುದ್ಧ ಆಂಗ್ಲ ನಾಯಕ ಬೆನ್ ಸ್ಟೋಕ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
20 ವರ್ಷದ ಸ್ಪಿನ್ ಬೌಲರ್ ಶೋಯೆಬ್ ಬಶೀರ್ ಭಾರತ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಗೆ ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾಗಿದ್ದರು. ಭಾರತಕ್ಕೆ ಬರಲು ವೀಸಾಕ್ಕಾಗಿ ಕಾಯುತ್ತಿದ್ದ ಅವರಿಗೆ ಕೊನೆಯ ಕ್ಷಣದವರೆಗೂ ಮಂಜೂರಾತಿ ಸಿಗದ ಕಾರಣ, ದುಬೈನಿಂದ ಇಂಗ್ಲೆಂಡ್‌ಗೆ ಮರಳಿದ್ದಾರೆ.
ಭಾರತದ ಪಿಚ್‌ಗಳಲ್ಲಿ ಇಂಗ್ಲೆಂಡ್‌ಗೆ ಉತ್ತಮ ಸ್ಪಿನ್ನರ್‌ನ ಅಗತ್ಯವಿತ್ತು. ಬಶೀರ್ ಭಾರತದ ಟರ್ನಿಂಗ್ ಪಿಚ್‌ಗಳಲ್ಲಿ ಇಂಗ್ಲೆಂಡ್‌ಗೆ ಟ್ರಂಪ್ ಕಾರ್ಡ್ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಹೀಗಾಗಿ ಅವರು ಅಬುಧಾಬಿಯಲ್ಲಿ ಇಂಗ್ಲೆಂಡ್ ತಂಡದೊಂದಿಗೆ ಕಠಿಣ ಅಭ್ಯಾಸ ಮಾಡಿದ್ದರು.
ವೀಸಾ ವಿಳಂಬ ಭಾರತಕ್ಕೆ ತೆರಳಲು ಇಂಗ್ಲೆಂಡ್ ಆಟಗಾರ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಅದರಲ್ಲಿ ನ್ಯೂನ್ಯತೆಗಳು ಇದ್ದ ಕಾರಣ ಮಂಜೂರಾಗಿಲ್ಲ ಎಂದು ಹೇಳಲಾಗಿದೆ. ಆದರೆ, ಬಶೀರ್ ಪಾಕಿಸ್ತಾನ ಮೂಲ ಎಂಬ ಕಾರಣಕ್ಕಾಗಿ ವೀಸಾ ವಿಳಂಬವಾಗಿದೆ ಎಂಬ ಮಾತು ಕೇಳಿಬಂದಿದೆ. ಇದೀಗ ವಿವಾದಕ್ಕೂ ಕಾರಣವಾಗಿದೆ.