ನವದೆಹಲಿ/ವಿಶಾಖಪಟ್ಟಣ:ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ ನಾಳೆಯಿಂದ (ಫೆ. 2) ವಿಶಾಖಪಟ್ಟಣದಲ್ಲಿ ನಡೆಯಲಿದ್ದು, ಟೀಂ ಇಂಡಿಯಾ ಪಂದ್ಯಕ್ಕೂ ಮುನ್ನ ನೆಟ್ಸ್ನಲ್ಲಿ ಭರ್ಜರಿ ಅಭ್ಯಾಸ ನಡೆಸಿದೆ. ಯುವ ಆಟಗಾರ ರಜತ್ ಪಾಟಿದಾರ್ ಅಭ್ಯಾಸದಲ್ಲಿ ನಿರತರಾಗಿದ್ದ ವಿಡಿಯೋವನ್ನು ಬಿಸಿಸಿಐ ತನ್ನ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡಿದೆ. ಇದು ಅಂತಾರಾಷ್ಟ್ರೀಯ ಟೆಸ್ಟ್ಗೆ ಪದಾರ್ಪಣೆ ಮಾಡುವ ಮುನ್ಸೂಚನೆ ಎನ್ನಲಾಗಿದೆ.
ಹೈದರಾಬಾದ್‌ನಲ್ಲಿ ನಡೆದ ಐದು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲಿನ ನಂತರ, ಟೀಂ ಇಂಡಿಯಾ ಗೆಲುವಿಗಾಗಿ ಹಾತೊರೆಯುತ್ತಿದೆ. ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಪ್ರವಾಸಿ ಇಂಗ್ಲೆಂಡ್ ತಂಡ 1-0 ಮುನ್ನಡೆ ಸಾಧಿಸಿದ್ದು, ನಾಳೆಯ ಟೆಸ್ಟ್ ಅನ್ನು ಭಾರತ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ. ಅದಕ್ಕಾಗಿ ಕೆಲವು ಬದಲಾವಣೆಯನ್ನು ಮಾಡಿಕೊಂಡಿದೆ. ಗಾಯಗೊಂಡಿರುವ ರವೀಂದ್ರ ಜಡೇಜಾ ಮತ್ತು ಕೆ ಎಲ್ ರಾಹುಲ್ ತಂಡದಿಂದ ಹೊರಗುಳಿದಿದ್ದು, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಸೌರಭ್ ಕುಮಾರ್ ಮತ್ತು ವಾಷಿಂಗ್ಟನ್ ಸುಂದರ್ಗೆ ಸ್ಥಾನ ನೀಡಲಾಗಿದೆ. ಐದರಲ್ಲಿ ಒಂದಕ್ಕಿ ಮುಂದಿರುವ ಆಂಗ್ಲರನ್ನು ಸೋಲಿಸಿ ಭಾರತ 1-1 ಸಮಬಲ ಸಾಧಿಸುವ ನಿರೀಕ್ಷೆ ಇಟ್ಟುಕೊಂಡಿದೆ. ಆದರೆ, ಉತ್ಸಾಹದಲ್ಲಿರುವ ಆಂಗ್ಲರ ತಂಡ ಇದಕ್ಕೆ ದಾರಿ ಮಾಡಿಕೊಡಬಲ್ಲದೇ ಅನ್ನೋದನ್ನು ಕಾದು ನೋಡಬೇಕಿದೆ.
ಆತ್ಮವಿಶ್ವಾಸದಲ್ಲಿ ಭಾರತ: ಶುಕ್ರವಾರ ನಡೆಯಬೇಕಿರುವ ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದ ಇತಿಹಾಸ ನೋಡಿದರೆ ಭಾರತಕ್ಕೆ ವರದಾನವೆಂದೇ ಹೇಳಲಾಗುತ್ತಿದೆ. ಕಾರಣ, ಈ ಮೈದಾನದಲ್ಲಿ ಟೀಂ ಇಂಡಿಯಾ ಆಡಿರುವ ಎರಡೂ ಟೆಸ್ಟ್ಗಳನ್ನು ತನ್ನದಾಗಿಸಿಕೊಂಡಿದ್ದು ಇದಕ್ಕೆ ಉದಾಹರಣೆಯಾಗಿದೆ. 2016 ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ, ಇದೇ ಆಂಗ್ಲರನ್ನು 246 ರನ್‌ಗಳಿಂದ ಸೋಲಿಸಿದ್ದನ್ನು ಈಗ ಸ್ಮರಿಸಿಕೊಳ್ಳಬಹುದು. ನವೆಂಬರ್ 17 ರಿಂದ 21ರ ವರೆಗೆ ಇದೇ ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ (119) ಮತ್ತು ವಿರಾಟ್ ಕೊಹ್ಲಿ (167) ಅವರು ಭರ್ಜರಿ ಶತಕ ಸಿಡಿಸಿದ್ದರು.