Ind vs Eng, 3rd ODI: ಇಂಗ್ಲೆಂಡ್ ವಿರುದ್ಧ ಇಂದು ನಡೆದ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿತು. ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಆಲ್ರೌಂಡರ್ ಪ್ರದರ್ಶನ ತೋರಿದ ಭಾರತೀಯರು ಆಂಗ್ಲರನ್ನು ಬಗ್ಗು ಬಡಿದು 142 ರನ್‌ಗಳಿಂದ ಬೃಹತ್ ಗೆಲುವು ದಾಖಲಿಸಿದರು.
ಟಾಸ್ ಗೆದ್ದರೂ ಆಂಗ್ಲರಿಗೆ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಆರಂಭಿಕ ಆಘಾತ ಎದುರಿಸಿತು. ಕಳೆದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ಘರ್ಜಿಸಿದ್ದ ರೋಹಿತ್ ಬ್ಯಾಟ್ ಮೌನಕ್ಕೆ ಶರಣಾಯಿತು. ಕೇವಲ ಒಂದು ರನ್ ಗಳಿಸಿ ಅವರು ನಿರ್ಗಮಿಸಿದರು. ಆದರೆ ಮತ್ತೊಂದು ತುದಿಯಿಂದ ಬ್ಯಾಟಿಂಗ್ ಆರಂಭಿಸಿದ್ದ ಗಿಲ್ ಮಾತ್ರ ಆಂಗ್ಲ ಬೌಲರ್ಗಳನ್ನು ದಂಡಿಸಿದರು. ಕೊಹ್ಲಿ ಜೊತೆಗೂಡಿ ಉತ್ತಮ ಸ್ಕೋರ್ ಕಲೆ ಹಾಕಿದರು. ಇಬ್ಬರು 107 ಎಸೆತಗಳಲ್ಲಿ 116 ರನ್ ಪೇರಿಸಿದರು.
ಕೊಹ್ಲಿ ಕಮ್‌ಬ್ಯಾಕ್: ಕಳಪೆ ಫಾರ್ಮ್‌ನಿಂದ ಕಂಗೆಟ್ಟಿದ್ದ ಕೊಹ್ಲಿ ಈ ಪಂದ್ಯದಲ್ಲಿ ಫಾರ್ಮ್‌ಗೆ ಮರಳಿದಂತೆ ಕಾಣುತ್ತಿದೆ. 55 ಎಸೆತಗಳನ್ನಾಡಿ 7 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 52 ರನ್ ಗಳಿಸಿ ನಿರ್ಗಮಿಸಿದರು. ಶುಭಮನ್ ಗಿಲ್ (112) ತಮ್ಮ ಆಟ ಮುಂದುವರೆಸಿ ಶತಕ ಪೂರ್ಣಗೊಳಿಸಿದರು.
ಅಯ್ಯರ್ 78 ರನ್‌ಗಳ ಉಪಯುಕ್ತ ಕೊಡುಗೆ ನೀಡಿದರೆ, ರಾಹುಲ್ ಮತ್ತೊಮ್ಮೆ ತಾವು 5ನೇ ಕ್ರಮಾಂಕದಲ್ಲೂ ಉತ್ತಮ ಬ್ಯಾಟ್ ಮಾಡಬಲ್ಲೆ ಎಂಬುದನ್ನು ಪ್ರೂವ್ ಮಾಡಿದರು. 29 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 40 ರನ್ ಬಾರಿಸಿದರು. ಒಟ್ಟಾರೆ ಟೀಂ ಇಂಡಿಯಾ ಸಾಂಘಿಕ ಬ್ಯಾಟಿಂಗ್ ಪ್ರದರ್ಶನದಿಂದ 50 ಓವರ್‌ಗಳಲ್ಲಿ 356 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಬೃಹತ್ ಸ್ಕೋರ್‌ಗೆ ಬೆಚ್ಚಿದ ಆಂಗ್ಲರು 214 ರನ್ ಗಳಿಗೆ ತಮ್ಮ ಆಟ ಮುಕ್ತಾಯಗೊಳಿಸಿದರು. ಇಂಗ್ಲಿಷರ ಪರ ಯಾವೊಬ್ಬ ಬ್ಯಾಟರ್‌ಗೂ ಕನಿಷ್ಠ ಅರ್ಧಶತಕ ಬಾರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತದ ಮಂದೆ ಮಂಡಿಯೂರಿದರು.