Ind vs Ban: ಐಸಿಸಿ ಚಾಂಪಿಯನ್ಸ್ ಟ್ರೋಫಿಯ 2ನೇ ಪಂದ್ಯದಲ್ಲಿ ಇಂದು ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿ ಆಗಿವೆ. ದುಬೈ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಬಾಂಗ್ಲಾ ಮೊದಲು ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಆಗಮಿಸಿ ಆರಂಭಿಕ ಆಘಾತ ಅನುಭವಿಸಿತು. ಟಾಪ್ ಆರ್ಡರ್ ಕೈಕೊಟ್ಟ ಕಾರಣ ತಂಡ ಸಂಕಷ್ಟಕ್ಕೆ ಸಿಲುಕಿತು.
ಆರಂಭಿಕ ಬ್ಯಾಟರ್ಗಳಾದ ತಂಜಿದ್ ಹಸನ್ (25), ಮೆಹದಿ ಹಸನ್ (5) ಹೊರತುಪಡಿಸಿ ಮೂವರು ಬ್ಯಾಟರ್ಗಳಾದ ಸೌಮ್ಯ ಸರ್ಕಾರ್, ಸಜ್ಮುಲ್ ಹೊಸೆನ್ ಶಾಂಟೋ, ಮುಷ್ಪಿಕರ್ ರಹಿಮ್ ಡಕ್ಔಟ್ ಆಗಿದ್ದು ತಂಡದ ಸ್ಕೋರ್ ಬೋರ್ಡ್ಗೆ ಭಾರೀ ಹೊಡೆತ ಬಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ತೊಹಿದ್ ಹ್ರದೋಯ್ ಮತ್ತು ಜಾಕರ್ ಅಲಿ ಅರ್ಧಶತಕ ಸಿಡಿಸಿ ಅಲ್ಪಮೊತ್ತದ ಸ್ಕೋರ್ನಿಂದ ತಂಡವನ್ನು ಪಾರು ಮಾಡಿದರು.
ಅಕ್ಷರ್ ಹ್ಯಾಟ್ರಿಕ್ ಸಾಧನೆ ಮಿಸ್:ಏತನ್ಮಧ್ಯೆ, ಅಕ್ಷರ್ ಪಟೇಲ್ ಹ್ಯಾಟ್ರಿಕ್ ವಿಕೆಟ್ ಮಿಸ್ ಆಗಿದ್ದು ಇದರಿಂದ ಐತಿಹಾಸಿಕ ದಾಖಲೆ ಸ್ವಲ್ಪದರಲ್ಲೇ ಕೈ ತಪ್ಪಿತು. ಈವರೆಗೂ ಚಾಂಪಿಯನ್ಸ್ ಟ್ರೋಫಿಯಲ್ಲಿ ಯಾವೊಬ್ಬ ಬೌಲರ್ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿಲ್ಲ. ಆದರೆ ಇಂದಿನ ಪಂದ್ಯಲ್ಲಿ ಅಕ್ಷರ್ ಪಟೇಲ್ ಹ್ಯಾಟ್ರಿಕ್ ಮಾಡುವ ಸುವರ್ಣಾವಕಾಶ ದೊರೆತಿತ್ತು. ಆದರೆ ನಾಯಕ ರೋಹಿತ್ ಶರ್ಮಾ ಮಾಡಿದ ತಪ್ಪಿನಿಂದಾಗಿ ಅಕ್ಷರ್ ಸಾಧನೆ ಕೈತಪ್ಪಿತು.