ಕಾನ್ಪುರ (ಉತ್ತರಪ್ರದೇಶ):ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಸೆಪ್ಟೆಂಬರ್ 27 ರಿಂದ ಇಲ್ಲಿನ ಗ್ರೀನ್‌ಪಾರ್ಕ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಇತ್ತಂಡಗಳು ಕ್ರೀಡಾಂಗಣದಲ್ಲಿ ಬೆವರು ಹರಿಸುತ್ತಿವೆ. ಪಂದ್ಯಕ್ಕಾಗಿ 6ನೇ ಪಿಚ್ ಅನ್ನು ನಿಗದಿ ಮಾಡಲಾಗಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಕ್ಯುರೇಟರ್ ಶಿವಕುಮಾರ್ ಅವರಿಂದ ಪಿಚ್ ಬಗ್ಗೆ ಮಾಹಿತಿ ಪಡೆದುಕೊಂಡರು.
ಕ್ಯುರೇಟರ್ ಶಿವಕುಮಾರ್ ಅವರು ಪಿಚ್ ಸಂಖ್ಯೆ ಐದು ಮತ್ತು ಆರರ ಬಗ್ಗೆ ಮಾಹಿತಿ ನೀಡಿದರು. 6ನೇ ಪಿಚ್ನ ಗುಣಮಟ್ಟ ಮತ್ತು ಅದು ವರ್ತಿಸುವ ಬಗ್ಗೆ ಕ್ಯುರೇಟರ್ ತಿಳಿಸಿದರು. ಪಂದ್ಯದ ಆರಂಭದಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಪಿಚ್ ಸಹಕಾರಿಯಾಗಲಿದೆ. ದಿನ ಕಳೆದಂತೆ ಸ್ಪಿನ್ ಬೌಲರ್‌ಗಳಿಗೆ ನೆರವು ನೀಡಲಿದೆ ಎಂದು ಕ್ಯುರೇಟರ್ ತಿಳಿಸಿದ್ದಾರೆ.
ಎರಡು - ಮೂರು ದಿನಗಳ ಆಟದ ನಂತರ ಪಿಚ್ನಲ್ಲಿ ಬಿರುಕುಗಳು ಕಾಣಿಸಿಕೊಂಡರೆ, ಚೆಂಡು ಹೆಚ್ಚು ಸ್ಪಿನ್ ಆಗಬಹುದು. ಇದು ಬೌಲರ್‌ಗಳಿಗೆ ನೇರ ಲಾಭವಾಗಲಿದೆ. ಹೀಗಾಗಿ ಪಿಚ್ ನಂಬರ್ 6ರಲ್ಲಿ ಟೆಸ್ಟ್ ಪಂದ್ಯ ನಡೆಯಲಿದೆ ಎಂದು ಪಿಚ್ ಕ್ಯುರೇಟರ್ ಶಿವಕುಮಾರ್ ಹೇಳಿದ್ದಾರೆ.
ಕುಲದೀಪ್ ಯಾದವ್‌ಗೆ ಅವಕಾಶ:ಸ್ಪಿನ್ ಬೌಲರ್‌ಗಳಿಗೆ ಪಿಚ್ ನೆರವಾಗುವ ಕಾರಣ, ಎರಡನೇ ಟೆಸ್ಟ್ ಪಂದ್ಯದಲ್ಲಿ ಹನ್ನೊಂದು ಆಟಗಾರರ ಆಯ್ಕೆಯಲ್ಲಿ ಭಾರತ ತಂಡ ಚೈನಾಮನ್ ಬೌಲರ್ ಕುಲದೀಪ್ ಯಾದವ್‌ಗೆ ಅವಕಾಶ ನೀಡಬಹುದು ಎಂಬ ಚರ್ಚೆಯೂ ಜೋರಾಗಿದೆ. ಆದರೆ, ಈ ವಿಚಾರದಲ್ಲಿ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ವಾಸ್ತವವಾಗಿ, ಗ್ರೀನ್‌ಪಾರ್ಕ್ ಸ್ಟೇಡಿಯಂ ಕುಲದೀಪ್ ಯಾದವ್‌ಗೆ ಹೋಮ್‌ಗ್ರೌಂಡ್ ಆಗಿದೆ. ಹೀಗಾಗಿ ಆಯ್ಕೆಗಾರರು ಕುಲದೀಪ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದಾರೆ.
ಪಂದ್ಯಕ್ಕೆ ಮಳೆ - ಬಿರುಗಾಳಿ ಭೀತಿ:ಶುಕ್ರವಾರದಿಂದ ಪಂದ್ಯ ಆರಂಭವಾಗಲಿದ್ದು, ಮಳೆ ಮತ್ತು ಬಿರುಗಾಳಿ ಭೀತಿ ಎದುರಾಗಿದೆ. ಗುರುವಾರದಿಂದಲೇ ವಾತಾವರಣ ಬದಲಾಗಿದೆ. ದಟ್ಟವಾದ ಮೋಡ ಕವಿದಿದೆ. ಸಂಜೆಯವರೆಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಮಳೆ ಬಂದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಆಟಗಾರರ ನೆಟ್ ಅಭ್ಯಾಸಕ್ಕೆ ತೊಡಕುಂಟಾಗಲಿದೆ. ಮಳೆ ಬರುವ ಸಾಧ್ಯತೆ ಗಮನದಲ್ಲಿಟ್ಟುಕೊಂಡು ಕವರ್‌ಗಳನ್ನು ಸಿದ್ಧಪಡಿಸಿದ್ದೇವೆ ಎಂದು ಗ್ರೀನ್‌ಪಾರ್ಕ್ ಸ್ಟೇಡಿಯಂನ ಪಿಚ್ ಕ್ಯುರೇಟರ್ ಶಿವಕುಮಾರ್ ಹೇಳಿದ್ದಾರೆ.
ಮೊದಲ ಪಂದ್ಯವನ್ನು ಭಾರತ ಗೆಲುವು ಸಾಧಿಸಿದ್ದು, 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮುಂದಿನ ಟೆಸ್ಟ್ ಅನ್ನು ಗೆಲ್ಲುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಭಾರತ ಹವಣಿಸುತ್ತಿದೆ.
ಇದನ್ನೂ ಓದಿ:ಐಸಿಸಿ ಟೆಸ್ಟ್ ಶ್ರೇಯಾಂಕ: ಶತಕ ಸಿಡಿಸಿ ಅಗ್ರ 6ನೇ ಸ್ಥಾನಕ್ಕೆ ಪಂತ್ ಲಗ್ಗೆ, ಕುಸಿದ ರೋಹಿತ್- ಕೊಹ್ಲಿ - ICC Test rankings