ಪ್ಯಾರಿಸ್(ಫ್ರಾನ್ಸ್):ಕೆಂಪು ಮಣ್ಣಿನ ಅಂಕಣದಲ್ಲಿ ಸೋಲಿಲ್ಲದ ರಾಣಿಯಂತೆ ಮೆರೆಯುತ್ತಿರುವ ಪೋಲ್ಯಾಂಡ್ನ ಇಗಾ ಸ್ವಿಯಾಟೆಕ್ ಸತತ ಮೂರನೇ ಸಲ ಫ್ರೆಂಚ್ ಓಪನ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಶನಿವಾರ ಇಲ್ಲಿ ನಡೆದ ಫೈನಲ್ನಲ್ಲಿ ಇಟಲಿಯ ಜಾಸ್ಮಿನ್ ಪಾವ್ಲೀನಿ ಅವರನ್ನು 6-2, 6-1 ನೇರ ಸೆಟ್‌ಗಳಿಂದ ಸುಲಭವಾಗಿ ಸೋಲಿಸಿದರು. ಕೇವಲ 1 ಗಂಟೆ 8 ನಿಮಿಷಗಳಲ್ಲಿ ಆಟ ಮುಗಿಯಿತು.
23 ವರ್ಷ ವಯಸ್ಸಿನ ಅಗ್ರ ಶ್ರೇಯಾಂಕಿತೆ ಆಟಗಾರ್ತಿ ಕಳೆದ ಐದು ವರ್ಷಗಳಲ್ಲಿ ಗೆದ್ದ ನಾಲ್ಕನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಇದಾಗಿದೆ. ರೋಲೆಂಡ್ ಗ್ಯಾರೋಸ್ನಲ್ಲಿ ಸೋಲೇ ಕಾಣದಂತೆ ಮುನ್ನುಗ್ಗುತ್ತಿರುವ ಇಗಾ, ಅವೆ ಮಣ್ಣಿನ ಅಂಕಣದಲ್ಲಿ ಗೆಲುವಿನ ಅಂತರವನ್ನು 21-0 ಇಗ್ಗಿಸಿದರು. ಜೊತೆಗೆ, ವೃತ್ತಿ ಜೀವನದಲ್ಲಿ 35-2 ರ ಸ್ಟ್ರೈಕ್ರೇಟ್ ಕಾಪಾಡಿಕೊಂಡರು.
ಆರಂಭದಲ್ಲಿ 1-2 ರಿಂದ ಹಿನ್ನಡೆಯಲ್ಲಿದ್ದ ಸ್ವಿಯಾಟೆಕ್, ಬಳಿಕ ಹಿಂತಿರುಗಿ ನೋಡದಂತೆ ಬಲವಾದ ಹೊಡೆತಗಳಿಂದ ಸತತ 10 ಗೇಮ್ ಪಾಯಿಂಟ್ ಗಳಿಸಿ ಮೊದಲ ಸೆಟ್ ಅನ್ನು 6-2 ರಲ್ಲಿ ಗೆದ್ದುಕೊಂಡರು. ಬಳಿಕದ ಎರಡನೇ ಸೆಟ್ನಲ್ಲೂ 12ನೇ ಶ್ರೇಯಾಂಕದ ಆಟಗಾರ್ತಿ ಜಾಸ್ಮಿನ್ ಪಾವ್ಲೀನಿ ಸೆಟೆದು ನಿಲ್ಲಲು ಸಾಧ್ಯವಾಗದೇ 6-1 ರಲ್ಲಿ ಸೆಟ್ ಬಿಟ್ಟುಕೊಡುವುದರ ಜೊತೆಗೆ ಮೊದಲ ಗ್ರ್ಯಾನ್ಸ್ಲಾಮ್ ಗೆಲ್ಲುವ ಅವಕಾಶವನ್ನು ತಪ್ಪಿಸಿಕೊಂಡರು.