ಹೈದರಾಬಾದ್:ಐಸಿಸಿ ಪುರುಷರ ಟಿ20 ವಿಶ್ವಕಪ್-2024ಕ್ಕೆ ದಕ್ಷಿಣ ಆಫ್ರಿಕಾ ತಂಡವನ್ನು ಮಂಗಳವಾರ ಪ್ರಕಟಿಸಲಾಯಿತು. ಹಿರಿಯ ಆಟಗಾರರಾದ ಕ್ವಿಂಟನ್ ಡಿ ಕಾಕ್, ಆ್ಯನ್ರಿಚ್ ನೋಕಿಯಾಗೆ ಸ್ಥಾನ ಸಿಕ್ಕರೆ, ಐಡೆನ್ ಮಾರ್ಕ್ರಮ್ ಅವರಿಗೆ ನಾಯಕತ್ವ ನೀಡಲಾಗಿದೆ. ಮಾರ್ಕ್ರಮ್ಗೆ ಇದು ಐಸಿಸಿ ಟೂರ್ನಿಯಲ್ಲಿ ಮೊದಲ ಮಹತ್ತರ ಹೊಣೆಯಾಗಿದೆ.
ಜೂನ್ 2ರಿಂದ ಅಮೆರಿಕ ಮತ್ತು ವೆಸ್ಟ್ ಇಂಡೀಸ್ನಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದೆ. ನಾಳೆ ತಂಡಗಳನ್ನು ಘೋಷಿಸಲು ಅಂತಿಮ ದಿನವಾಗಿದೆ. ಈ ಗಡುವಿಗೆ ಒಂದು ದಿನ ಮೊದಲು ದಕ್ಷಿಣ ಆಫ್ರಿಕಾ ತನ್ನ 15 ಸದಸ್ಯರ ತಂಡವನ್ನು ಅಂತಿಮಗೊಳಿಸಿದೆ.
ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಕೇಂದ್ರ ಗುತ್ತಿಗೆಯಿಂದ ಹೊರಗುಳಿದಿರುವ ಆ್ಯನ್ರಿಚ್ ನೋಕಿಯಾ ಮತ್ತು ಕ್ವಿಂಟನ್ ಡಿ ಕಾಕ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಬೆನ್ನು ನೋವಿನ ಕಾರಣ 2023ರಿಂದ ನೋಕಿಯಾ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಹೊರಗುಳಿದಿದ್ದರು. ಡಿ ಕಾಕ್ ಕಳೆದ ವರ್ಷದ ವಿಶ್ವಕಪ್ ನಂತರ ಏಕದಿನ ಮಾದರಿಗೆ ನಿವೃತ್ತಿ ಘೋಷಿಸಿದ್ದರು. 2022ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ಇಬ್ಬರು ಹೊಸಬರಿಗೆ ಚಾನ್ಸ್:ತಂಡದಲ್ಲಿ ಇಬ್ಬರು ಹೊಸಬರಿಗೆ ಅವಕಾಶ ಸಿಕ್ಕಿದೆ. ಇತ್ತೀಚೆಗೆ ನಡೆದ SA20 ಪಂದ್ಯಾವಳಿಯಲ್ಲಿ 173.77 ಸರಾಸರಿಯಲ್ಲಿ ಬ್ಯಾಟ್ ಬೀಸಿ 530 ರನ್ ಕಲೆಹಾಕಿದ್ದ ಎಂಐ ಕೇಪ್ಟೌನ್ ತಂಡದ ರಿಯಾನ್ ಒಟ್ನಿಯೆಲ್ ಮತ್ತು ಹಾಲಿ ಚಾಂಪಿಯನ್ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ಒಟ್ನಿಯೆಲ್ ಬಾರ್ಟ್ಮನ್ಗೆ ಚೊಚ್ಚಲ ಬಾಗಿಲು ತೆರೆದಿದೆ. ಬಾರ್ಟ್‌ಮನ್ ಟಿ-20 ಟೂರ್ನಿಯಲ್ಲಿ 8 ಪಂದ್ಯಗಳಲ್ಲಿ 18 ವಿಕೆಟ್ ಉರುಳಿಸಿದ್ದರು.