Champions Trophy 2025: ಮುಂದಿನ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ (ICC Champions Trophy)ಗೆ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗಲ್ಲ ಎಂದು ಈಗಾಗಲೇ ಬಿಸಿಸಿಐ (BCCI) ಸ್ಪಷ್ಟಪಡಿಸಿದೆ. ಇದರ ಬೆನ್ನಲ್ಲೇ ಪಾಕಿಸ್ತಾನವೂ ಕೂಡ ಟ್ರೋಫಿಯಿಂದ ಹಿಂದೆ ಸರಿಯಲು ಚಿಂತಿಸಿದೆ.
ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಸುವ ಉದ್ದೇಶವಿಲ್ಲ ಎಂದು ಹೇಳಿರುವ ಪಾಕ್, ಭಾರತ ತಂಡ ಟೂರ್ನಿಗಾಗಿ ಪಾಕಿಸ್ತಾನ ಬರಲೇಬೇಕು ಎಂದು ಪಟ್ಟು ಹಿಡಿದಿದೆ. ಇದಲ್ಲದೆ, ಭಾರತ ಐಸಿಸಿ(ICC)ಗೆ ಪತ್ರ ಬರೆದು ಪಾಕಿಸ್ತಾನಕ್ಕೆ ಹೋಗದಿರಲು ಕಾರಣಗಳನ್ನು ಲಿಖಿತ ರೂಪದಲ್ಲಿ ತಿಳಿಸಿದೆ. ಒಂದು ವೇಳೆ ಪಾಕ್ ಹೈಬ್ರಿಡ್ ಮಾದರಿ ಒಪ್ಪಿಕೊಂಡರೆ ಭಾರತ ಆಡುವ ಪಂದ್ಯಗಳಿಗೆ ಶ್ರೀಲಂಕಾ, ದುಬೈ ಅಥವಾ ದಕ್ಷಿಣ ಆಫ್ರಿಕಾ ಈ ಮೂರರಲ್ಲಿ ಒಂದನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ಭಾರತದಲ್ಲಿ ಚಾಂಪಿಯನ್ಸ್ ಟ್ರೋಫಿ?:ಪಾಕಿಸ್ತಾನ ಈಗಾಗಲೇ ಹೈಬ್ರಿಡ್ ಮಾದರಿ ಪ್ರಸ್ತಾವನೆ ತಿರಸ್ಕರಿಸಿದೆ. ಅಗತ್ಯ ಬಿದ್ದರೆ ಟೂರ್ನಿಯಿಂದಲೇ ಹಿಂದೆ ಸರಿಯಲಿದೆ ಎಂದೂ ಹೇಳಲಾಗುತ್ತಿದೆ. ಒಂದು ವೇಳೆ ಪಾಕಿಸ್ತಾನ ಈ ಧೋರಣೆ ಮುಂದುವರಿಸಿದರೆ, ಬಿಸಿಸಿಐ ಟೂರ್ನಿಯನ್ನು ಕೈವಶ ಮಾಡಿಕೊಳ್ಳುವ ಸಾಧ್ಯತೆ ಇದೆ. 2025ರ ಚಾಂಪಿಯನ್ಸ್ ಟ್ರೋಫಿಯನ್ನು ಭಾರತದಲ್ಲಿ ನಡೆಸುವ ಕುರಿತು ಬಿಸಿಸಿಐ ವಲಯಗಳಲ್ಲಿ ಚರ್ಚೆಗಳು ನಡೆದಿವೆ ಎಂದು ವರದಿಯಾಗಿದೆ. ಆದರೆ ಈ ಚರ್ಚೆಗಳು ಇನ್ನೂ ಪ್ರಾಥಮಿಕ ಹಂತದಲ್ಲಿದ್ದು ಯಾವುದನ್ನೂ ಅಂತಿಮಗೊಳಿಸಿಲ್ಲ ಎಂದು ತಿಳಿದು ಬಂದಿದೆ.