ನವದೆಹಲಿ:ಟಿ20 ಕ್ರಿಕೆಟ್ ಯುವಕರ ಆಟ. ಇಲ್ಲಿ ಅತಿ ಕಡಿಮೆ ಎಸೆತದಲ್ಲಿ ಅತಿ ಹೆಚ್ಚು ರನ್ ಕಲೆ ಹಾಕುವ ಕಿಲಾಡಿ ಬೇಕು. ಹೆಚ್ಚಾಗಿ ಹಿರಿಯ ಕ್ರಿಕೆಟಿಗರು ಈ ಚುಟುಕು ಮಾದರಿಗೆ ಹೊಂದಿಕೊಳ್ಳುವುದು ಕಷ್ಟ. ಹೀಗಿದ್ದರೂ, 2007 ರಿಂದ ಆರಂಭವಾಗಿರುವ ಮೊದಲ ಟಿ20 ವಿಶ್ವಕಪ್ನಿಂದ ಹಿಡಿದು ಇಲ್ಲಿಯವರೆಗೂ ಎಲ್ಲ ಆವೃತ್ತಿಗಳಲ್ಲಿ ಆಡಿದ ಆಟಗಾರರು ಯಾರು ಎಂಬುದು ಕುತೂಹಲದ ಸಂಗತಿ.
ಐಸಿಸಿ ಆಯೋಜಿಸುವ ಟಿ20 ವಿಶ್ವಕಪ್ ಈವರೆಗೂ 8 ಸೀಸನ್ ಕಂಡಿವೆ. 2024 ರ ಆವೃತ್ತಿ 9ನೇಯದ್ದಾಗಿದೆ. 17 ವರ್ಷಗಳಲ್ಲಿ ಅದೆಷ್ಟೋ ಆಟಗಾರರು ಕ್ರಿಕೆಟ್ಗೆ ನಿವೃತ್ತಿ ಹೇಳಿದ್ದಾರೆ. ಆದರೆ, ಇಬ್ಬರು ಆಟಗಾರರು ಮಾತ್ರ ಎಲ್ಲ ಟಿ20 ವಿಶ್ವಕಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಭಾರತದ ಆಟಗಾರ ಕೂಡ ಒಬ್ಬರು ಎಂಬುದು ವಿಶೇಷ.
ನಿಜ. 9ನೇ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಆಡುವ ಮೂಲಕ ಎಲ್ಲ ಆವೃತ್ತಿಗಳಲ್ಲಿ ಪಾಲ್ಗೊಂಡ ಭಾರತೀಯ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ. ಇದರೊಂದಿಗೆ ಬಾಂಗ್ಲಾದೇಶದ ಆಲ್ರೌಂಡರ್ ಶಕೀಬ್ ಅಲ್ ಹಸನ್ ಅವರೂ ಈ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಇಬ್ಬರು ಆಟಗಾರರು ಮಾತ್ರ ಐಸಿಸಿ ಎಲ್ಲ ಟಿ20 ವಿಶ್ವಕಪ್‌ನಲ್ಲಿ ಆಡಿದ್ದಾರೆ. ರೋಹಿತ್ ಮತ್ತು ಶಕೀಬ್ ಇದುವರೆಗೆ 8 ಸೀಸನ್‌ಗಳಲ್ಲಿ ಭಾಗವಹಿಸಿದ್ದಾರೆ. ಈಗ ಅವರು 9ನೇ ಋತುವಿನಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರೂ ಕ್ರಿಕೆಟಿಗರು 2007 ರಿಂದ 2022 ರವರೆಗಿನ ಪ್ರತಿ ಟಿ20 ವಿಶ್ವಕಪ್‌ನಲ್ಲಿ ಆಡಿ ಉತ್ತಮ ಪ್ರದರ್ಶನ ನೀಡಿದ್ದಾರೆ.