ಹೈದರಾಬಾದ್: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 17ನೇ ಆವೃತ್ತಿ ಆರಂಭಕ್ಕೂ ಮುನ್ನವೇ ಭಾರಿ ಕುತೂಹಲ ಕೆರಳಿಸಿದೆ. ಏಕೆಂದರೆ ಮುಂದಿನ ದಿನಗಳಲ್ಲಿ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಎಲ್ಲ ಫ್ರಾಂಚೈಸಿಗಳಲ್ಲೂ ಹೊಸ ಆಟಗಾರರನ್ನು ಕಾಣಬಹುದು.
ಮೆಗಾ ಹರಾಜಿಗೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ತಂಡ ತೊರೆದು ಆರ್ಸಿಬಿಗೆ ಬರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದರ ನಡುವೆ ಇದೀಗ ಮತ್ತೊಂದು ಸುದ್ದಿ ವೈರಲ್ ಆಗುತ್ತಿದೆ. ಮುಂಬೈ ಇಂಡಿಯನ್ಸ್ ಸ್ಟಾರ್ ಆಲ್ರೌಂಡರ್ ತಂಡ ತೊರೆದು ಆರ್‌ಸಿಬಿ ಸೇರಲಿದ್ದಾರೆ ಎನ್ನಲಾಗುತ್ತಿದೆ.
ಹೌದು, ಈ ಆಟಗಾರ ಬೇರಾರೂ ಅಲ್ಲ. ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ. ಹಾರ್ದಿಕ್ ಹಲವು ವರ್ಷಗಳ ಕಾಲ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇವರು ಆಲ್ರೌಂಡರ್ ಪ್ರದರ್ಶನದಿಂದ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಅಲ್ಲದೇ 2022-23ರಲ್ಲಿ ಗುಜರಾತ್ ತಂಡದ ಯಶಸ್ವಿ ನಾಯಕರಾಗಿದ್ದು ಒಂದು ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೂ ಕೊಂಡೊಯ್ದಿದ್ದಾರೆ.
ಇವರ ಆಟ ಗಮನಿಸಿದ ಮುಂಬೈ ಈ ವರ್ಷ ಮತ್ತೆ ತವರು ತಂಡಕ್ಕೆ ವಾಪಸ್ ಕರೆಸಿ ರೋಹಿತ್ ಬದಲಿಗೆ ಅವರಿಗೆ ನಾಯಕತ್ವ ನೀಡಿತ್ತು. ಆದರೆ ಇವರ ನಾಯಕತ್ವದಲ್ಲಿ ಮುಂಬೈ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಇದರಿಂದಾಗಿ ಪಾಂಡ್ಯ ಭಾರಿ ಟೀಕೆಗೆ ಗುರಿಯಾಗಿದ್ದರು. ಇದೀಗ ಪಾಂಡ್ಯ ಅವರನ್ನು ಮುಂಬೈ ಕೈಬಿಡಲಿದೆ ಎಂದು ವರದಿಯಾಗಿದೆ.