ನವಿ ಮುಂಬೈ(ಮಹಾರಾಷ್ಟ್ರ):ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬಹಳ ದಿನಗಳ ಬಳಿಕ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡರು. ನವಿ ಮುಂಬೈನಲ್ಲಿ ಇಂದಿನಿಂದ 18ನೇ ಆವೃತ್ತಿಯ ಡಿ.ವೈ.ಪಾಟೀಲ್ ಟಿ20 ಕಪ್ ಶುರುವಾಗಿದ್ದು, ದೇಶೀಯ ಟೂರ್ನಿಯಲ್ಲಿ ರಿಲಯನ್ಸ್ ನಂಬರ್ ಒನ್ ತಂಡದ ನಾಯಕತ್ವ ವಹಿಸಿಕೊಳ್ಳುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದರು. ಭಾರತ್ ಪೆಟ್ರೋಲಿಯಂ ತಂಡದ ವಿರುದ್ಧ ಪಾಂಡ್ಯ ತಮ್ಮ ಅಭಿಯಾನ ಆರಂಭಿಸಿದ್ದಾರೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಐಸಿಸಿ ಏಕದಿನ 2023ರ ವಿಶ್ವಕಪ್ ಗ್ರೂಪ್ ಹಂತದ ಪಂದ್ಯದಲ್ಲಿ ಪಾಂಡ್ಯ ಪಾದದ ಗಾಯಕ್ಕೊಳಗಾಗಿದ್ದರು. ಇದಾಗಿ ಸುಮಾರು ನಾಲ್ಕು ತಿಂಗಳ ಬಳಿಕ ಇದೀಗ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಕ್ರೀಡಾಂಗಣದಲ್ಲಿ ಮೊದಲಿನಂತೆ ಬೌಲಿಂಗ್ ಮಾಡಿ ತಾವು ಫಿಟ್ ಎಂದು ತೋರಿಸಿಕೊಟ್ಟರು. ಒಟ್ಟು ಮೂರು ಓವರ್ ಮಾಡಿದ ಪಾಂಡ್ಯ, 22 ರನ್ ನೀಡಿ ಎರಡು ವಿಕೆಟ್ ಪಡೆದರು. ಬಳಿಕ 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದು, ನಾಲ್ಕು ಎಸೆತಗಳಲ್ಲಿ 3 ರನ್ ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ, ರಿಲಯನ್ಸ್ ತಂಡವು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ತಂಡವನ್ನು ಸೋಲಿಸಿತು.
ರಿಲಯನ್ಸ್ ಪರ ದೇವ್ ಲಾಕ್ರಾ (3-31) ಮತ್ತು ಪಿಯೂಷ್ ಚಾವ್ಲಾ (3-15) ವಿಕೆಟ್ ಪಡೆದರು. ಅನುಕುಲ್ ರಾಯ್ ಭಾರತ್ ಪೆಟ್ರೋಲಿಯಂ ಪರ ಅಜೇಯ 30 ರನ್ ಗಳಿಸಿ ಟಾಪ್ ಸ್ಕೋರರ್ ಆದರು. ಡಿ.ವೈ.ಪಾಟೀಲ್ ಟಿ20 ಟೂರ್ನಿ ಎರಡು ವಾರಗಳ ಕಾಲ ನಡೆಯಲಿದ್ದು ಮಾರ್ಚ್ 10ರಂದು ಫೈನಲ್ ನಡೆಯಲಿದೆ. ಟೂರ್ನಿಯಲ್ಲಿ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಮತ್ತು ಶ್ರೇಯಸ್ ಅಯ್ಯರ್ ಕೂಡ ಭಾಗವಹಿಸಲಿದ್ದಾರೆ.
ಈ ಹಿಂದೆ ವರದಿಯಾದಂತೆ ಟಿ20 ವಿಶ್ವಕಪ್ ಮತ್ತು ಬಿಳಿ ಚೆಂಡಿನ ಪಂದ್ಯಗಳನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಹಾರ್ದಿಕ್ ಪಾಂಡ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಿತ್ತು. 30 ವರ್ಷ ವಯಸ್ಸಿನ ಪಾಂಡ್ಯ ಅಂದಿನಿಂದ ತಮ್ಮ ಫಿಟ್‌ನೆಸ್‌ಗಾಗಿ ಶ್ರಮಿಸುತ್ತಿದ್ದರು. ಇದೀಗ ನಾಲ್ಕು ತಿಂಗಳ ನಂತರ ಮೊದಲ ಬಾರಿಗೆ ಮೈದಾನಕ್ಕಿಳಿದಿದ್ದಾರೆ. ಐಪಿಎಲ್ 2024ರ 17ನೇ ಸೀಸನ್ಗೂ ಮುನ್ನವೇ ಫಿಟ್ ಆಗಿ ಮೈದಾನಕ್ಕೆ ಮರಳುತ್ತಿರುವುದು ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಮುಂಬರುವ ಟಿ20 ವಿಶ್ವಕಪ್ ವೇಳೆಗೆ ಅವರು ಭಾರತ ತಂಡ ಸೇರಿಕೊಳ್ಳಲಿದ್ದಾರೆ. ಐಪಿಎಲ್ನಲ್ಲಿ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಇದನ್ನೂ ಓದಿ:IND vs End: 4ನೇ ಟೆಸ್ಟ್‌ನಲ್ಲಿ 5 ವಿಕೆಟ್ ಜಯ, ತವರಿನಲ್ಲಿ ಸತತ 17ನೇ ಸರಣಿ ಗೆದ್ದ ಭಾರತ