ಹೈದರಾಬಾದ್: ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅತ್ಯುತ್ತಮ ಪ್ರದರ್ಶನ ತೋರಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅವರು ಟೀಂ ಇಂಡಿಯಾ ಪಂದ್ಯವನ್ನು ಗೆಲ್ಲುವಂತೆ ಮಾಡಿದ್ದು ಮಾತ್ರವಲ್ಲದೆ, ವಿರಾಟ್ ಕೊಹ್ಲಿ ದಾಖಲೆ ಮುರಿದರು.
ಟಿ20 ಸ್ವರೂಪದಲ್ಲಿ ಐದನೇ ಬಾರಿಗೆ ಸಿಕ್ಸರ್ ಬಾರಿಸುವ ಮೂಲಕ ಪಂದ್ಯವನ್ನು ಅವರು ಅಂತ್ಯಗೊಳಿಸಿದರು. ಇದಕ್ಕೂ ಮುನ್ನ ಈ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಅವರು ನಾಲ್ಕು ಬಾರಿ ಸಿಕ್ಸರ್ ಬಾರಿಸಿ ಪಂದ್ಯ ಮುಗಿಸಿದ್ದರು. 2022ರ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಪಾಂಡ್ಯ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಮುಗಿಸಿದ್ದರು. ಇದಲ್ಲದೆ, 2020ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20ಯಲ್ಲಿ ಕೊನೆಯ ಎರಡು ಎಸೆತಗಳಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸಿದ್ದರು. ಪಾಂಡ್ಯ ಐದು ಬಾರಿ ಮತ್ತು ಕೊಹ್ಲಿ ನಾಲ್ಕು ಬಾರಿ ಈ ಸಾಧನೆ ಮಾಡುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನದಲ್ಲಿದ್ದರೆ, ರಿಷಭ್ ಪಂತ್ ಮತ್ತು ಧೋನಿ ತಲಾ ಮೂರು ಬಾರಿ ಈ ಸಾಧನೆ ಮಾಡುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.