ಕರಾಚಿ (ಪಾಕಿಸ್ತಾನ):ದೈತ್ಯ ಬೌಲಿಂಗ್ ಪಡೆಯನ್ನು ಹೊಂದಿದ್ದರೂ, ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಲೀಗ್ ಹಂತದಲ್ಲಿ ಹೊರಬಿದ್ದಿರುವುದು ಭಾರೀ ಟೀಕೆಗೆ ಗುರಿಯಾಗಿದೆ. ಜೊತೆಗೆ ಹಿರಿಯ ಆಟಗಾರರ ಕಳಪೆ ಪ್ರದರ್ಶನ, ಮುಸುಕಿನ ಗುದ್ದಾಟ ಇಡೀ ತಂಡವನ್ನೇ ಬಲಿ ಪಡೆದಿದೆ. ಇದೆಲ್ಲ ಮನಗಂಡಿರುವ ಕ್ರಿಕೆಟ್ ಮಂಡಳಿ ತಂಡಕ್ಕೆ ಸರ್ಜರಿ ಮಾಡುವ ಬಗ್ಗೆ ಯೋಚಿಸಿದೆ.
ವಿಶ್ವಕಪ್ ಆತಿಥ್ಯ ವಹಿಸಿರುವ ಕ್ರಿಕೆಟ್ ಶಿಶು ಅಮೆರಿಕದ ಎದುರು ಸೂಪರ್ ಓವರ್ನಲ್ಲಿ ಪಾಕಿಸ್ತಾನ ಹೀನಾಯ ಸೋಲು ಕಂಡಿತು. ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿದಾಗ್ಯೂ ತಂಡ ಕಳಪೆ ಆಟವಾಡಿದ್ದು, ನಾಯಕ ಬಾಬರ್ ಅಜಂ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಇತ್ತೀಚಿಗಷ್ಟೇ ಅವರು ತಂಡದ ನಾಯಕತ್ವ ವಹಿಸಿದ್ದರು.
ತಂಡದಲ್ಲಿ ಮೂರು ಗುಂಪುಗಳು:ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮೂಲಗಳ ಪ್ರಕಾರ, ನಾಯಕನಾಗಿ ಪುನರಾಗಮನದ ನಂತರ ಬಾಬರ್ ಅಜಮ್ ಮುಂದೆ ತಂಡವನ್ನು ಒಗ್ಗೂಡಿಸುವುದೇ ದೊಡ್ಡ ಸವಾಲಾಗಿತ್ತು. ನಾಯಕ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ವೇಗಿಶಾಹೀನ್ ಶಾ ಆಫ್ರಿದಿ ತೀವ್ರ ಅಸಮಾಧಾನಗೊಂಡಿದ್ದಾರೆ. ತಮ್ಮನ್ನು ನಾಯಕತ್ವಕ್ಕೆ ಪರಿಗಣಿಸದಿರುವುದು ಮೊಹಮ್ಮದ್ ರಿಜ್ವಾನ್ಗೆ ಬೇಸರ ತರಿಸಿದೆ. ಇದು ತಂಡದ ತಾಳಮೇಳ ತಪ್ಪಿಸಿದೆ.
ತಂಡದಲ್ಲಿ ಬಾಬರ್ ಅಜಮ್, ಶಾಹೀನ್ ಅಫ್ರಿದಿ, ಮೊಹಮ್ಮದ್ ರಿಜ್ವಾನ್ ನೇತೃತ್ವದಲ್ಲಿ ಮೂರು ಗುಂಪುಗಳಿವೆ. ಮಹಮದ್ ಅಮೀರ್, ಇಮಾದ್ ವಾಸಿಮ್ ಅವರಂತಹ ಹಿರಿಯರು ತಂಡದಲ್ಲಿ ಸ್ಥಾನ ಪಡೆದರೂ, ಚುಟುಕು ಮಾದರಿಗೆ ಅವರ ಒಗ್ಗಿಕೊಳ್ಳದೇ ಇರುವುದು ವಿಶ್ವಕಪ್ ಲೀಗ್ನಿಂದಲೇ ಹೊರಬೀಳಲು ಕಾರಣವಾಯಿತು ಎಂದು ತಂಡದ ಮೂಲವೊಂದು ತಿಳಿಸಿದೆ.