ಹೈದರಾಬಾದ್:ಟಿ-20 ವಿಶ್ವಕಪ್‌ನಂತಹ ಪ್ರಮುಖ ಮತ್ತು ಮಹತ್ವದ ಸರಣಿಗೆ ಯಾವುದೇ ತಂಡ ಸಜ್ಜಾದಾಗ ಸಾಮಾನ್ಯವಾಗಿ ಆ ತಂಡದ ತಯಾರಿ ಅಥವಾ ವಿಶ್ವಕಪ್ ಗೆಲ್ಲುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತದೆ. ಆದರೆ, ಈ ಬಾರಿ ಭಾರತೀಯ ಕ್ರಿಕೆಟ್ನಲ್ಲಿ ಮುಂದಿನ ಮುಖ್ಯ ಕೋಚ್ ನೇಮಕದ ಬಗ್ಗೆ ಅಭಿಮಾನಿಗಳಲ್ಲಿ ಊಹಾಪೋಹಗಳು ಹಬ್ಬಿಕೊಂಡಿವೆ.
ಟೀಂ ಇಂಡಿಯಾದ ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯು ಜೂನ್ 2ರಿಂದ ಪ್ರಾರಂಭವಾಗುವ ಟಿ-20 ವಿಶ್ವಕಪ್ ಮುಕ್ತಾಯದೊಂದಿಗೆ ಕೊನೆಗೊಳ್ಳಲಿದೆ. ದ್ರಾವಿಡ್ ಅವರ ಮೂಲ ಅಧಿಕಾರಾವಧಿಯು 2023ರ ಏಕದಿನ ವಿಶ್ವಕಪ್ಗೆ ಪೂರ್ಣಗೊಂಡಿತ್ತು. ಆದರೆ, ಬಿಸಿಸಿಐ ಕೆರಿಬಿಯನ್ ದ್ವೀಪಗಳು ಮತ್ತು ಅಮೆರಿಕಾದಲ್ಲಿ ನಡೆಯಲಿರುವ ಈ ಟಿ-20 ವಿಶ್ವಕಪ್ವರೆಗೆ ವಿಸ್ತರಿಸಿದೆ. ಇದೀಗ ದ್ರಾವಿಡ್ ಕೋಚ್ ಆಗಿ ಮುಂದುವರೆಯುವ ಆಸಕ್ತಿ ತೋರಿಸಿಲ್ಲ. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಸ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.
ಮುಂದಿನ ಎರಡು ತಿಂಗಳಲ್ಲಿ ದ್ರಾವಿಡ್ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ, ಆಸ್ಟ್ರೇಲಿಯಾದ ಮಾಜಿ ಬ್ಯಾಟರ್‌ಗಳಾದ ಜಸ್ಟಿನ್ ಲ್ಯಾಂಗರ್ ಮತ್ತು ರಿಕಿ ಪಾಂಟಿಂಗ್ ಅವರ ಕೋಚ್ ಹುದ್ದೆಗೆ ಕೇಳಿ ಬಂದಿತ್ತು. ಬಳಿಕ ಇಬ್ಬರೂ ಬಹಿರಂಗವಾಗಿ ಈ ಪ್ರಸ್ತಾಪವನ್ನು ತಿರಸ್ಕರಿಸಿರುವುದಾಗಿ ಹೇಳಿಕೊಂಡಿದ್ದರು. ಮತ್ತೊಂದೆಡೆ, ಆಸೀಸ್ ಕ್ರಿಕೆಟಿಗರನ್ನು ಯಾರನ್ನೂ ಸಂಪರ್ಕಿಸಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು.
ಇದೀಗ ಭಾರತ ತಂಡದ ಮಾಜಿ ಸದಸ್ಯ ಗೌತಮ್ ಗಂಭೀರ್ ಮುಂದಿನ ಭಾರತ ಮುಖ್ಯ ಕೋಚ್ ಆಗುವ ಸಾಧ್ಯತೆಯಿದೆ ಎಂದು ವರದಿಗಳು ಹೇಳುತ್ತಿವೆ. ಅವರು ಇದುವರೆಗೂ ಪರಿಪೂರ್ಣ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿಲ್ಲ. ಆದರೆ, ಐಪಿಎಲ್ನಲ್ಲಿ 2022 ಮತ್ತು 2023ರಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಮೆಂಟರ್ ಆಗಿ ಕೆಲಸ ಮಾಡಿದ್ದಾರೆ. ಎರಡೂ ಆವೃತ್ತಿಗಳಲ್ಲಿ ಲಖನೌ ತಂಡವು ಪ್ಲೇಆಫ್‌ಗೇರಿತ್ತು. ಈ ಬಾರಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮೆಂಟರ್ ಆಗಿದ್ದು, ಈ ತಂಡವು ಪ್ರಶಸ್ತಿಯನ್ನೂ ಗೆದ್ದಿದೆ ಎಂಬುವುದು ಗಮನಾರ್ಹ.
ಗಂಭೀರ್ ಕೋಚ್ ಆದರೆ, ಯಾವ ಬದಲಾವಣೆ ತರಬಲ್ಲರು?: ಒಂದು ವೇಳೆ, ಗೌತಮ್ ಗಂಭೀರ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಆಯ್ಕೆಯಾದರೆ, ಈ ಕೆಲ ಬದಲಾವಣೆಗಳನ್ನು ತರುವುದಂತೂ ಖಚಿತ. ತಂಡದಲ್ಲಿನ ಯುವ ಪ್ರತಿಭೆಗಳ ಬೆಂಬಲಿಸುವುದು ಮತ್ತು ಅವರ ಆಟದಲ್ಲಿ ಸುಧಾರಣೆಯನ್ನು ತರಬಲ್ಲರು. ಇದನ್ನು ನಾಯಕ ಮತ್ತು ಮೆಂಟರ್ ಆಗಿ ಗಂಭೀರ್ ತೋರಿಸಿಕೊಟ್ಟಿದ್ದಾರೆ.