ಪ್ಯಾರಿಸ್:2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಭಾರತದ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರಿಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಕೈತಪ್ಪಿದೆ. ನಿನ್ನೆ ನಡೆದ ಮಹಿಳೆಯರ 49 ಕೆಜಿ ವೇಟ್ ಲಿಪ್ಟಿಂಗ್ನಲ್ಲಿ ಮೀರಾಬಾಯಿ ಅಂತಿಮ ಹಂತದಲ್ಲಿ ನಾಲ್ಕನೇ ಸ್ಥಾನಕ್ಕೆ ಇಳಿದರು. ಇದರಿಂದ ಭಾರತ ಮತ್ತೊಂದು ಪದಕವನ್ನು ಕಳೆದುಕೊಂಡಿದೆ.
ಇಂದಿಗೆ 30ನೇ ವರ್ಷಕ್ಕೆ ಕಾಲಿಡುತ್ತಿರುವ ಮೀರಾಬಾಯಿ ಒಟ್ಟು 199ಕೆಜಿ (88ಕೆಜಿ+111ಕೆಜಿ) ಭಾರ ಎತ್ತಿದರು. ಇದು ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಆಕೆ ಎತ್ತಿದ್ದ ಕೆಜಿಗಿಂದ 3 ಕೆಜಿ ಕಡಿಮೆಯಾಗಿದೆ. 200 ಕೆಜಿ ಭಾರವನ್ನು ಎತ್ತಿದ್ದರೆ ಚಾನುಗೆ ಕಂಚಿನ ಪದಕ ದೊರಕುತಿತ್ತು.
ಸ್ನಾಚ್ ಸುತ್ತಿನಲ್ಲಿ ಮೀರಾಬಾಯಿ ತಮ್ಮ ಮೊದಲ ಪ್ರಯತ್ನದಲ್ಲಿ 85 ಕೆಜಿ ಭಾರವನ್ನು ಎತ್ತಿದ್ದರು. 2ನೇ ಪ್ರಯತ್ನದಲ್ಲಿ 88 ಕೆಜಿ ಎತ್ತಲು ವಿಫಲರಾದರು. ಮೂರನೇ ಪ್ರಯತ್ನದಲ್ಲಿ 88 ಕೆಜಿ ಎತ್ತಿ ಮೂರನೇ ಸ್ಥಾನ ಪಡೆದುಕೊಂಡರು. ಇದಾದ ಬಳಿಕ ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲಿ 111 ಕೆಜಿ ಎತ್ತುವಲ್ಲಿ ವಿಫಲರಾದರು. ಆದರೆ ತಮ್ಮ ಹಠದಿಂದ 2 ನೇ ಯತ್ನದಲ್ಲಿ 111 ಕೆಜಿ ಭಾರ ಎತ್ತುವಲ್ಲಿ ಸಕ್ಸಸ್ ಕೂಡಾ ಆದರು. ಇನ್ನು ಮೂರನೇಯ ಪ್ರಯತ್ನದಲ್ಲಿ 114 ಕೆಜಿ ಭಾರ ಎತ್ತುವಲ್ಲಿ ಮತ್ತೆ ವಿಫಲರಾಗಿ 4ನೇ ಸ್ಥಾನಕ್ಕೆ ಚಾನು ಕುಸಿತ ಕಂಡರು. ಈ ಮೂಲಕ ಅವರು ತಮ್ಮ ಅಭಿಯಾನವನ್ನು ಮುಗಿಸಿದರು.
ಇನ್ನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚೀನಾದ ಹೌ ಝಿಹುಯಿ ಅವರು 206 ಕೆಜಿ (89 ಕೆಜಿ + 117 ಕೆಜಿ) ಎತ್ತುವ ಮೂಲಕ ಕ್ಲೀನ್ ಮತ್ತು ಜರ್ಕ್ ಒಲಿಂಪಿಕ್ ದಾಖಲೆಯನ್ನು ಮುರಿದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಹಾಗೇ ರೊಮೇನಿಯಾದ ಆಟಗಾರ್ತಿ ಮಿಹೇಲಾ ಕ್ಯಾಂಬೇಯಿ ಒಟ್ಟು 205 ಕೆಜಿ (93 ಕೆಜಿ + 112 ಕೆಜಿ) ತೂಕವನ್ನು ಲಿಫ್ಟ್ ಮಾಡುವ ಬೆಳ್ಳಿ ಗೆದ್ದುಕೊಂಡರು. ಸುರೋದ್ಚಾನಾ ಖಂಬಾವೊ ಅವರು 200 ಕೆಜಿ (88 ಕೆಜಿ + 112 ಕೆಜಿ) ಭಾರವನ್ನು ಎತ್ತುವ ಮೂಲಕ ಕಂಚಿನ ಪದಕ ಪಡೆದರು. ಇನ್ನು 199 ಕೆ ಜಿ ಭಾರ ಎತ್ತುವ ಮೂಲಕ ಕೇವಲ ಒಂದೇ ಒಂದು ಕೆಜಿ ಭಾರದ ಹಿನ್ನಡೆಯೊಂದಿಗೆ ಮೀರಾಬಾಯಿ ಚಾನು ನಾಲ್ಕನೇ ಸ್ಥಾನಕ್ಕೆ ಕುಸಿಯುವ ಮೂಲಕ ಕಂಚಿನಿಂದ ವಂಚಿತರಾಗಿ ನಿರಾಸೆ ಅನುಭವಿಸಿದರು.
ಇದನ್ನೂ ಓದಿ:ಕುಸ್ತಿಗೆ ವಿದಾಯ ಘೋಷಿಸಿದ ವಿನೇಶ್ ಫೋಗಟ್: ಎಕ್ಸ್ ಪೋಸ್ಟ್ ಮೂಲಕ ಭಾವನಾತ್ಮಕ ಸಂದೇಶ - Phogat has announced her retirement