ಹೈದರಾಬಾದ್: 2024ರ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೂಪರ್ 8 ಪಂದ್ಯದ ವೇಳೆ ಭಾರತವು ಚೆಂಡನ್ನು ವಿರೂಪಗೊಳಿಸಿದೆ ಎಂದು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಗಂಭೀರ ಆರೋಪ ಮಾಡಿದ್ದಾರೆ.
ಸೇಂಟ್ ಲೂಸಿಯಾದ ಡೇರೆನ್ ಸಾಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತವು 24 ರನ್ಗಳ ಭರ್ಜರಿ ಜಯ ಸಾಧಿಸಿತ್ತು. ಈ ಪಂದ್ಯದ ವೇಳೆಯಲ್ಲಿ ಚೆಂಡು ವಿರೂಪಗೊಳಿಸಲಾಗಿತ್ತು ಎಂದು ಆರೋಪಿಸಿರುವ ಹಕ್, 16ನೇ ಓವರ್ನಲ್ಲಿ ಅರ್ಷ್ದೀಪ್ ಅವರು ಎರಡನೇ ಸ್ಪೆಲ್ನ ಬೌಲಿಂಗ್ ಮಾಡಲು ಬಂದಾಗ ಈ ಘಟನೆ ಸಂಭವಿಸಿದೆ ಎಂದಿದ್ದಾರೆ. ಆ ಸಂದರ್ಭದಲ್ಲಿ ಚೆಂಡಿಗೆ ಏನೋ ಮಾಡಲಾಯಿತು. ಇದರಿಂದಾಗಿಯೇ ಭಾರತದ ಎಡಗೈ ವೇಗಿ ಅರ್ಷ್ದೀಪ್ ಸಿಂಗ್ ಆಸ್ಟ್ರೇಲಿಯಾದ ಇನ್ನಿಂಗ್ಸ್ನಲ್ಲಿ ರಿವರ್ಸ್ ಸ್ವಿಂಗ್ ಮಾಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಈ ಪಂದ್ಯದಲ್ಲಿ ಭಾರತದ ಪರ ಅರ್ಷ್ದೀಪ್ 37ಕ್ಕೆ 3 ವಿಕೆಟ್ ಪಡೆದು ಮಿಂಚಿದರು. ಅವರು ಇನ್ನಿಂಗ್ಸ್ ನ ಮೊದಲ ಓವರ್ನಲ್ಲಿ ಡೇವಿಡ್ ವಾರ್ನರ್ ಅವರನ್ನು ಔಟ್ ಮಾಡಿ, 18 ನೇ ಓವರ್ ನಲ್ಲಿ ಮ್ಯಾಥ್ಯೂ ವೇಡ್ ಮತ್ತು ಟಿಮ್ ಡೇವಿಡ್ ಅವರನ್ನು ಕೂಡ ಪವಿಲಿಯನ್ಗೆ ಕಳುಹಿಸಿದ್ದರು. ಆದರೆ ಅರ್ಷ್ದೀಪ್ ತನ್ನ ಎರಡು ಓವರ್ಗಳ ಎರಡನೇ ಸ್ಪೆಲ್ ಆರಂಭಿಸಿದಾಗ ಏನೋ ನಡೆದಿದೆ ಎಂದು ಇಂಜಮಾಮ್ ಹೇಳಿದ್ದು, ಇಂಥ ಘಟನೆಗಳ ಬಗ್ಗೆ ನಿಗಾ ವಹಿಸುವಂತೆ ಅವರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.