ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಕಳಪೆ ಫಾರ್ಮ್ನಿಂದ ಬಳಲುತ್ತಿರುವುದು ಗೊತ್ತೆ ಇದೆ. 2024ರ ಟಿ20 ವಿಶ್ವಕಪ್ ನಂತರ ಹಿಟ್ಮ್ಯಾನ್ ಬ್ಯಾಟಿಂಗ್ ಹದಗೆಟ್ಟಿದೆ. ಒಂದೊಂದು ರನ್ಗಳಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಪ್ರಭಾವ ಬೀರಲು ಸಾಧ್ಯವಾಗುತ್ತಿಲ್ಲ.
ಇತ್ತೀಚೆಗೆ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಹೀನಾಯವಾಗಿ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದರು. ಇದಾದ ಬಳಿಕ ರಣಜಿಯಲ್ಲೂ ಸಿಂಗಲ್ ಡಿಜಿಟ್ಗೆ ನಿರ್ಗಮಿಸಿದ್ದರು. ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ಕಳಪೆ ಪ್ರದರ್ಶನ ಮುಂದುವರೆದಿದೆ.
ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ರೋಹಿತ್ ಕೇವಲ 2 ರನ್‌ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಈ ಹಿಂದೆ ಶಾರ್ಟ್ ಪಿಚ್ ಬೌಲ್ಗಳಿಗೆ ಸಲೀಸಾಗಿ ಸಿಕ್ಸರ್ ಬಾರಿಸುತ್ತಿದ್ದ ಹಿಟ್ಮ್ಯಾನ್ ಇದೀಗ ಅದೇ ಎಸೆತಗಳಿಗೆ ವಿಕೆಟ್ ಕೈಚೆಲ್ಲುತ್ತಿದ್ದಾರೆ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಸಂಜಯ್ ಬಂಗಾರ್ ಸಲಹೆ: ಅದರಲ್ಲೂ ಚಾಂಪಿಯನ್ಸ್ ಟ್ರೋಫಿ ಹೊಸ್ತಿಲ್ಲಲ್ಲಿರುವ ಕಾರಣ ಅಷ್ಟರೊಳಗೆ ರೋಹಿತ್ ಫಾರ್ಮ್ಗೆ ಮರಳಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಇದರ ನಡುವೆಯೇ, ಟೀಂ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ರೋಹಿತ್ ಶರ್ಮಾಗೆ ಪ್ರಮುಖ ಸಂದೇಶವೊಂದನ್ನು ನೀಡಿದ್ದಾರೆ. ರೋಹಿತ್ ಶರ್ಮಾ ತಮ್ಮ ಕಳೆದು ಹೋಗಿರುವ ಫಾರ್ಮ್ ಅನ್ನು ಮರಳಿ ಪಡೆಯಲು ತಾವಾಡಿರುವ ಹಿಂದಿನ ಪಂದ್ಯಗಳ ವೀಡಿಯೊಗಳನ್ನು ನೋಡಬೇಕು ಎಂದಿದ್ದಾರೆ.