ಬೆಂಗಳೂರು:ಮೊದಲ ಆವೃತ್ತಿಯ ಯಶಸ್ಸಿನ ಬಳಿಕ ಎರಡನೇ ಆವೃತ್ತಿಗೆ ಸಜ್ಜಾಗಿರುವ 'ಒನ್ ವರ್ಲ್ಡ್ ಒನ್ ಫ್ಯಾಮಿಲಿ' ಕಪ್‌ನಲ್ಲಿ ಈ ಸಲ ಭಾರತ ಹಾಗೂ ಶ್ರೀಲಂಕಾ ತಂಡಗಳು ಸೆಣಸಾಡಲಿವೆ.
ಶ್ರೀ ಮಧುಸೂದನ್ ಸಾಯಿ ಗ್ಲೋಬಲ್ ಹ್ಯುಮ್ಯಾನಿಟೇರಿಯನ್ ಮಿಷನ್ ವತಿಯಿಂದ ಆಯೋಜಿಸಲ್ಪಡುವ ಟ್ರೋಫಿಯನ್ನು ಇಂದು ಬೆಂಗಳೂರಿನಲ್ಲಿ ಭಾರತದ ಮಾಜಿ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್ ಹಾಗೂ ಮಧುಸೂದನ್ ಅನಾವರಣಗೊಳಿಸಿದರು.
'ಒನ್ ವರ್ಲ್ಡ್ ಒನ್ ಫ್ಯಾಮಿಲಿ' (OWOF) ಕಪ್ ಅನ್ನು ಒಂದು ಮಾನವೀಯ ಉದ್ದೇಶದಿಂದ ಆಯೋಜಿಸಲಾಗುತ್ತಿದ್ದು, ಆ ಮೂಲಕ ನಿವೃತ್ತ ಕ್ರಿಕೆಟ್ ದಿಗ್ಗಜರು ಚಿಕ್ಕಬಳ್ಳಾಪುರ ಜಿಲ್ಲೆಯ ಕ್ರಿಕೆಟ್ ಮೈದಾನದಲ್ಲಿ ಮತ್ತೊಮ್ಮೆ ಒಗ್ಗೂಡಲಿದ್ದಾರೆ. ಫೆಬ್ರವರಿ 8, 2025ರಂದು ಮುದ್ದೇನಹಳ್ಳಿಯ ಸಾಯಿ ಕೃಷ್ಣನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ 'ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್- 025'ನಲ್ಲಿ ಭಾರತ ಹಾಗೂ ಶ್ರೀಲಂಕಾದ ಮಾಜಿ ಅಂತಾರಾಷ್ಟ್ರೀಯ ದಿಗ್ಗಜ ಕ್ರಿಕೆಟಿಗರು ಕಣಕ್ಕಿಳಿಯಲಿದ್ದಾರೆ.
ಜನವರಿ 2024ರಲ್ಲಿ ನಡೆದ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್‌ನ ಮೊದಲ ಆವೃತ್ತಿಯ ಎರಡು ತಂಡಗಳನ್ನು ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ಆಲ್‌ರೌಂಡರ್ ಯುವರಾಜ್ ಸಿಂಗ್ ಮುನ್ನಡೆಸಿದ್ದರು. ಈ ತಂಡದಲ್ಲಿ ಏಳು ರಾಷ್ಟ್ರಗಳ ವಿವಿಧ ಮಾಜಿ ಆಟಗಾರರು ಭಾಗಿಯಾಗಿದ್ದರು.
ಈ ಸಲ ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ ಮತ್ತು ಮುತ್ತಯ್ಯ ಮುರಳೀಧರನ್, ಅಜಂತಾ ಮೆಂಡಿಸ್, ಚಮಿಂಡಾ ವಾಸ್ ಅವರಂತಹ ದಿಗ್ಗಜರು ಈ ಬಾರಿ ಭಾರತ ಮತ್ತು ಶ್ರೀಲಂಕಾದ ನಿವೃತ್ತ ದಿಗ್ಗಜರು ಮಾನವೀಯ ಕಾರಣಕ್ಕಾಗಿ ಮತ್ತೆ ಮೈದಾನಕ್ಕಿಳಿಯುತ್ತಿದ್ದಾರೆ. ಪಂದ್ಯದ ಮೂಲಕ ಸಂಗ್ರಹವಾಗುವ ಹಣವನ್ನು ಸಾಮಾಜಿಕ ಪರಿಣಾಮಕ್ಕಾಗಿ ನಿರ್ದಿಷ್ಟ ಯೋಜನೆಗಳಿಗೆ ಬಳಸಲಾಗುತ್ತದೆ.
''2025ರ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್‌ನಲ್ಲಿ ಭಾರತ ಮತ್ತು ಶ್ರೀಲಂಕಾದ ಪ್ರಸಿದ್ಧ ಕ್ರಿಕೆಟಿಗರು ಅವರ ದೇಶಗಳಿಗಾಗಿ ಅಲ್ಲದೆ ಇಡೀ ಮಾನವೀಯತೆಗಾಗಿ ಕಣಕ್ಕಿಳಿಯಲಿದ್ದಾರೆ. ಈ ಸಲದ ಕ್ರಿಕೆಟ್ ಆಟವು ಗಡಿಗಳನ್ನು ಮೀರಿ ಏಕತೆ, ಕರುಣೆ, ಕಾಳಜಿ, ಸಾಮೂಹಿಕ ಜವಾಬ್ದಾರಿ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರಲಿದೆ. ನಾವು ಗಡಿಗಳನ್ನು ಮಸುಕುಗೊಳಿಸಿ ಮಾನವೀಯತೆಯ ಸಮುದ್ರದಲ್ಲಿ ವಿಲೀನಗೊಳ್ಳುವ ಸಮಯ ಇದಾಗಿದೆ'' ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್‌ನ ಸಂಸ್ಥಾಪಕ ಮಧುಸೂದನ್ ಸಾಯಿ ತಿಳಿಸಿದರು.
ಭಾರತದ ಮಾಜಿ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್ ಮಾತನಾಡಿ, ''ನಿಜವಾದ ಶ್ರೇಷ್ಠತೆ ನಾವು ಗಳಿಸುವ ರನ್‌ಗಳಲ್ಲಿ ಅಲ್ಲ, ನಾವು ಜೀವಿಸುವ ಜೀವನದಲ್ಲಿ ಅಡಗಿದೆ ಎಂದು ನನಗೆ ಕ್ರಿಕೆಟ್ ಕಲಿಸಿದೆ. ನನ್ನ ಕ್ರೀಡಾ ದಿನಗಳಲ್ಲಿ, ನಾವು ನಮ್ಮ ರಾಷ್ಟ್ರದ ಹೆಮ್ಮೆಗಾಗಿ ಆಡಿದ್ದೇವೆ. ಇಲ್ಲಿ ಮಾನವೀಯತೆಯ ಹೆಮ್ಮೆಗಾಗಿ ಆಡುತ್ತೇವೆ. ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್ ಒಂದು ಸಾಮೂಹಿಕ ಗೆಲುವಾಗಿದೆ. ಈ ಗೆಲುವು ಕೇವಲ ಒಂದು ತಂಡ, ಒಂದು ದೇಶ ಅಥವಾ ಒಂದು ಖಂಡಕ್ಕೆ ಸೇರಿದ್ದಲ್ಲ, ಆದರೆ ಅದು ಇಡೀ ಮಾನವೀಯತೆಗೆ ಸೇರಿದ್ದು'' ಎಂದರು.