ರಾಂಚಿ:ಇಲ್ಲಿನ ಜೆಎಸ್‌ಸಿಎ ಇಂಟರ್‌ನ್ಯಾಷನಲ್ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ. ಭಾರತದ ಪರ ವೇಗದ ಬೌಲರ್ ಆಕಾಶ್ ದೀಪ್ ಪದಾರ್ಪಣೆ ಮಾಡುತ್ತಿದ್ದಾರೆ.
ಈಗಾಗಲೇ 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆಯಲ್ಲಿರುವ ಭಾರತ ಗೆಲುವಿನ ವಿಶ್ವಾಸದಲ್ಲಿದೆ. ಇನ್ನೊಂದೆಡೆ, ಇಂಗ್ಲೆಂಡ್ ರಾಂಚಿಯಲ್ಲಿ ಜಯ ದಾಖಲಿಸಿ ಸರಣಿ ಸಮಬಲ ಸಾಧಿಸುವತ್ತ ಹೋರಾಟ ನಡೆಸಲಿದೆ. ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಆಕಾಶ್ ದೀಪ್ಗೆ ಟೆಸ್ಟ್ ಕ್ಯಾಪ್ ನೀಡಿ, ಶುಭ ಹಾರೈಸಿದರು.
ಇನ್ನುಳಿದಂತೆ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಕಳೆದ ಪಂದ್ಯದಲ್ಲಿ ಆಡಿರುವ ಆಟಗಾರರನ್ನೇ ನಾಲ್ಕನೇ ಪಂದ್ಯಕ್ಕೂ ಮುಂದುವರೆಸಲಾಗಿದೆ. ವೇಗಿ ಬುಮ್ರಾ ವಿಶ್ರಾಂತಿ ಹಿನ್ನೆಲೆಯಲ್ಲಿ ಆಕಾಶ್ ದೀಪ್ಗೆ ಅವಕಾಶ ಒಲಿದುಬಂದಿದೆ. ಮತ್ತೊಂದೆಡೆ, ಇಂಗ್ಲೆಂಡ್ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದ್ದು, ಈಗಾಗಲೇ ಘೋಷಣೆ ಮಾಡಿರುವಂತೆ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿಯುತ್ತಿದೆ. ಮಧ್ಯಮ ವೇಗದ ಬೌಲರ್ ಆಲಿ ರಾಬಿನ್ಸನ್ ಹಾಗೂ ಯುವ ಸ್ಪಿನ್ನರ್ ಶೋಯೆಬ್ ಬಶೀರ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇವರಿಗಾಗಿ ವೇಗಿ ಮಾರ್ಕ್ ವುಡ್ ಹಾಗೂ ಸ್ಪಿನ್ನರ್ ರೆಹಾನ್ ಅಹ್ಮದ್ 11ರ ಬಳಗದಿಂದ ಹೊರಬಿದ್ದಿದ್ದಾರೆ.
ಈ ಪಂದ್ಯದಲ್ಲಿ ಎರಡೂ ತಂಡಗಳ ಕೆಲ ಆಟಗಾರರು ದಾಖಲೆಗಳ ಸನಿಹದಲ್ಲಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ 4,000 ಟೆಸ್ಟ್ ರನ್ ಸಮೀಪದಲ್ಲಿದ್ದಾರೆ. 23 ರನ್ ಗಳಿಕೆ ಮಾಡಿದರೆ ಹೊಸ ಮೈಲಿಗಲ್ಲು ತಲುಪಲಿದ್ದಾರೆ. ಹಾಗೆಯೇ, ಇಂಗ್ಲೆಂಡ್ ಹಿರಿಯ ವೇಗಿ ಜೇಮ್ಸ್ ಆಂಡರ್ಸನ್ 700 ಟೆಸ್ಟ್ ವಿಕೆಟ್ ಪಡೆಯಲು ನಾಲ್ಕು ಹುದ್ದರಿಗಳ ಅಗತ್ಯವಿದೆ. ಸದ್ಯ 185 ಟೆಸ್ಟ್‌ಗಳಲ್ಲಿ 696 ವಿಕೆಟ್ ಕಬಳಿಸಿದ್ದಾರೆ.