ಲಂಡನ್ (ಇಂಗ್ಲೆಂಡ್): ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಜರುಗಿದ ವೆಸ್ಟ್ ಇಂಡೀಸ್ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಇನ್ನಿಂಗ್ಸ್ ಹಾಗೂ 114 ರನ್ಗಳ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ತಮ್ಮ 21 ವರ್ಷದ ವೃತ್ತಿ ಜೀವನಕ್ಕೆ ಇಂದು ತೆರೆ ಎಳೆದಿದ್ದಾರೆ. ಇದು ಅವರ ಕೊನೆಯ ಟೆಸ್ಟ್ ಆಗಿದ್ದರಿಂದ ಮೈದಾನಕ್ಕೆ ಇಳಿಯುತ್ತಿದ್ದಂತೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಹೊರಹಾಕಿದರು.
ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗಿರುವ ಜೇಮ್ಸ್, ಟೆಸ್ಟ್ ಕ್ರಿಕೆಟ್ನಲ್ಲಿ 704 ವಿಕೆಟ್ ಸಾಧನೆ ಮಾಡಿದ ವಿಶ್ವದ ಮೊದಲ ಮತ್ತು ಮೂರನೇ ಬೌಲರ್ ಆಗಿ ಹೊರ ಹೊಮ್ಮಿದ್ದಾರೆ. ವೃತ್ತಿ ಜೀವನದುದ್ದಕ್ಕೂ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಪರಿಣಾಮಕಾರಿ ಬೌಲರ್ ಆಗಿ ಮುಂಚೂಣಿ ಪಾತ್ರ ನಿರ್ವಹಿಸಿದ್ದರು. ಟೆಸ್ಟ್ ಕ್ರಿಕೆಟ್ ವೃತ್ತಿಜೀವನ ಆರಂಭಿಸಿದ್ದ ಲಾರ್ಡ್ಸ್ ಮೈದಾನದಲ್ಲೇ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದಾರೆ. ಸುಮಾರು 21 ವರ್ಷಗಳ ಕಾಲ ಆಂಗ್ಲರ ಪರ ಸೇವೆ ಸಲ್ಲಿಸಿ ಇಂದು ಸುದೀರ್ಘ ವೃತ್ತಿ ಬದುಕಿಗೆ ತೆರೆ ಎಳೆದರು.
2003ರ ಮೇ 22ರಂದು ಲಾರ್ಡ್ಸ್ನಲ್ಲೇ ಜಿಂಬಾಬ್ವೆ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈಗ 2024 ಜುಲೈ 10ರಂದು ಆರಂಭಗೊಂಡ ಟೆಸ್ಟ್ ಪಂದ್ಯವು ಅವರ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ವಿಂಡೀಸ್ ವಿರುದ್ಧದ ಈ ಟೆಸ್ಟ್‌ನಲ್ಲಿ 4 ವಿಕೆಟ್‌ಗಳನ್ನು ಪಡೆಯುವ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಖುಷಿಯ ಉಡುಗೊರೆ ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ಪಡೆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಕಬಳಿಸಿದರು. ಇದರೊಂದಿಗೆ ಆ್ಯಂಡರ್ಸನ್ ಅವರ ಟೆಸ್ಟ್ ಸಂಖ್ಯೆ 704ಕ್ಕೆ ಏರಿತು.
ಮೂರೇ ದಿನಕ್ಕೆ ಮುಕ್ತಾಯಗೊಂಡ ಈ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್, ಅಮೋಘ ಗೆಲುವು ದಾಖಲಿಸಲು ಜೇಮ್ಸ್ ಆ್ಯಂಡರ್ಸನ್ ಪ್ರಮುಖ ಪಾತ್ರವಹಿಸಿದರು. ಅಲ್ಲದೆ, ವಿಕೆಟ್ ಬೇಟೆಯಾಡುವ ಮೂಲಕ ಗಮನ ಸೆಳೆದರು. ತಂಡದ ಮತ್ತೊಬ್ಬ ವೇಗಿ ಗಸ್ ಅಟ್ಕಿನ್ಸನ್ ಮೊದಲ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್‌ಗಳನ್ನು ಪಡೆಯುವ ಮೂಲಕ ಆ್ಯಂಡರ್ಸನ್ಗಿಂತ ಹೆಚ್ಚು ಗಮನ ಸೆಳೆದರು. ಆದರೆ, ಜೇಡನ್ ಸೀಲ್ಸ್ ಅವರ ಇನ್ನಿಂಗ್ಸ್‌ನ ಅಂತಿಮ ವಿಕೆಟ್ ಪಡೆದ ಆ್ಯಂಡರ್ಸನ್ ಗಮನ ಸೆಳೆದರು. ಅವರು ಈಗಾಗಲೇ ಏಕದಿನ ಮತ್ತು ಟಿ20 ಮಾದರಿಗಳಿಂದ ನಿವೃತ್ತಿ ಹೊಂದಿದ್ದರು.