ಹೈದರಾಬಾದ್: ಸರ್ಬಿಯಾದ ಎಂಟು ವರ್ಷದ ಲಿಯೋನಿಡ್ ಇವಾನೊವಿಕ್ ಕ್ಲಾಸಿಕ್ ಮಾದರಿಯ ಚೆಸ್ ಟೂರ್ನಿಯಲ್ಲಿ ಗ್ರ್ಯಾಂಡ್ ಮಾಸ್ಟರ್ ಒಬ್ಬರನ್ನು ಸೋಲಿಸಿದ ಒಂಬತ್ತು ವರ್ಷದೊಳಗಿನ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲಿಯೋನಿಡ್ 59 ವರ್ಷದ ಜಿಎಂ ಮಿಲ್ಕೊ ಪೊಪ್ಚೆವ್ ಅವರನ್ನು ಸೋಲಿಸಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಈ ಗೆಲುವಿನೊಂದಿಗೆ, ಇವಾನೊವಿಕ್ ಎಂಟು ವರ್ಷ, 11 ತಿಂಗಳು ಮತ್ತು ಏಳು ದಿನಗಳ ವಯಸ್ಸಿನಲ್ಲಿ ಕ್ಲಾಸಿಕಲ್ ಚೆಸ್ನಲ್ಲಿ ಗ್ರ್ಯಾಂಡ್ ಮಾಸ್ಟರ್ ವಿರುದ್ಧ ಗೆಲುವು ದಾಖಲಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಎದುರಾಳಿಯು ಪ್ರಬಲ ಅಥವಾ ಅತ್ಯುನ್ನತ ರೇಟಿಂಗ್ ಪಡೆದ ಗ್ರ್ಯಾಂಡ್ ಮಾಸ್ಟರ್ ಆಗಿರಲಿಲ್ಲವಾದರೂ ಒಂಬತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಚೆಸ್ ನ ಕ್ಲಾಸಿಕಲ್ ಪಂದ್ಯಾವಳಿಯಲ್ಲಿ ಗ್ರ್ಯಾಂಡ್ ಮಾಸ್ಟರ್ ಒಬ್ಬರನ್ನು ಸೋಲಿಸಿದ ಕೀರ್ತಿಗೆ ಇವಾನೊವಿಕ್ ಭಾಜನರಾಗಿದ್ದಾರೆ.
ಇದಕ್ಕೂ ಮುನ್ನ ಅಮೆರಿಕದ ಗ್ರ್ಯಾಂಡ್ ಮಾಸ್ಟರ್ ಅವಂಡರ್ ಲಿಯಾಂಗ್ 9 ವರ್ಷ, 3 ತಿಂಗಳು ಮತ್ತು 20 ದಿನಗಳ ವಯಸ್ಸಿನಲ್ಲಿ ಲ್ಯಾರಿ ಕೌಫ್ಮನ್ ಅವರನ್ನು ಸೋಲಿಸುವ ಮೂಲಕ ಈ ದಾಖಲೆ ನಿರ್ಮಿಸಿದ್ದರು. 2011 ರಲ್ಲಿ, ಹೆತುಲ್ ಶಾ ಅವರು ಒಂಬತ್ತು ವರ್ಷ ಮತ್ತು ಆರು ತಿಂಗಳ ವಯಸ್ಸಿನವರಾಗಿದ್ದಾಗ ಏಳನೇ ಪಾರ್ಶ್ವನಾಥ್ ಇಂಟರ್ ನ್ಯಾಷನಲ್ ಓಪನ್ ಚೆಸ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಜಿಎಂ ನುರ್ಲಾನ್ ಇಬ್ರಾಯೆವ್ ಅವರನ್ನು ಸೋಲಿಸುವ ಮೂಲಕ ಗ್ರ್ಯಾಂಡ್ ಮಾಸ್ಟರ್ ಅನ್ನು ಸೋಲಿಸಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.