ಹೈದರಾಬಾದ್: ವಿಶ್ವದ ಜನಪ್ರಿಯ ಕ್ರೀಡೆಗಳಲ್ಲಿ ಕ್ರಿಕೆಟ್ ಕೂಡ ಒಂದಾಗಿದೆ. 16ನೇ ಶತಮಾನದಲ್ಲಿ ಇಂಗ್ಲೆಂಡ್ನಲ್ಲಿ ಹುಟ್ಟಿಕೊಂಡ ಇದು ಇಂದು ವಿಶ್ವದ ಎರಡನೇ ಜನಪ್ರಿಯ ಕ್ರೀಡೆಯಾಗಿದೆ. ಅದರಲ್ಲೂ ಭಾರತ ಅತೀ ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ದೇಶದಲ್ಲಿ ಕ್ರಿಕೆಟ್ ಕೇವಲ ಕ್ರೀಡೆಯಾಗಿರದೇ ಒಂದು ಧರ್ಮವಾಗಿ ಬೆಳೆದು ನಿಂತಿದೆ.
ಇದಕ್ಕೆ ಕಾರಣ ಹಿಂದೆ ದಿಗ್ಗಜರು ನೀಡಿರುವ ಕೊಡುಗೆಗಳು. ಅಂತಹ ದಿಗ್ಗಜರ ಪಟ್ಟಿಯಲ್ಲಿ ಬುಚ್ಚಿ ಬಾಬು ಕೂಡ ಒಬ್ಬರಾಗಿದ್ದಾರೆ. ಹೌದು, ದಕ್ಷಿಣ ಭಾರತದ ಕ್ರಿಕೆಟ್ ಪಿತಾಮಹ ಎಂದು ಕರೆಯಲ್ಪಡುವ ಬುಚ್ಚಿ ಬಾಬು ಅವರು ಸ್ವಾತಂತ್ರ್ಯ ಪೂರ್ವದಲ್ಲಿ ದಕ್ಷಿಣ ಭಾರತ ಭಾಗದಲ್ಲಿ ಕ್ರಿಕೆಟ್ ಅನ್ನು ಉತ್ತೇಜಿಸಲು ಶ್ರಮ ವಹಿಸಿದ್ದರು. ಅವರ ಅಂದಿನ ಶ್ರಮದ ಫಲವಾಗಿ ಇಂದು ದಕ್ಷಿಣ ಭಾರತದಲ್ಲಿ ಕ್ರಿಕೆಟ್ ಹೆಮ್ಮರವಾಗಿ ಬೆಳೆದು ನಿಂತಿದೆ. ಹಾಗಾದ್ರೆ ಯಾರು ಈ ಬುಚ್ಚಿ ಬಾಬು, ಏತಕ್ಕೆ ಇವರ ಹೆಸರಲ್ಲಿ ಟೂರ್ನಮೆಂಟ್ ಆಯೋಜಿಸಲಾಗುತ್ತದೆ ಎಂಬುದನ್ನು ಈ ಸುದ್ದಿಯಲ್ಲಿ ತಿಳಿಯಿರಿ.
ಯಾರು ಈ ಬುಚ್ಚಿಬಾಬು:ಬುಚ್ಚಿ ಬಾಬು ನಾಯ್ಡು ಎಂದೂ ಕರೆಯಲ್ಪಡುವ ಮೋತವರಪು ವೆಂಕಟ ಮಹಿಪತಿ ನಾಯ್ಡು, ದಕ್ಷಿಣ ಭಾರತದಲ್ಲಿ ಕ್ರಿಕೆಟ್ ಅಭಿವೃದ್ಧಿ ಹೊಂದಲು ಪ್ರಮುಖ ಪಾತ್ರ ವಹಿಸಿದ್ದಾರೆ. ಕ್ರಿಕೆಟ್ ಪ್ರವರ್ತಕರಾಗಿದ್ದ ಇವರು ಮದ್ರಾಸ್ ಪ್ರೆಸಿಡೆನ್ಸಿ ಆರಂಭಿಸಿ ಆಂಗ್ಲರ ವಿರುದ್ಧ ಸ್ಪರ್ಧಿಸಲೆಂದು ಸ್ಥಳೀಯ ಆಟಗಾರರಿಗೆ ವೇದಿಕೆ ಕಲ್ಲಿಸಿದರು. ಅವರ ಈ ಯೋಜನೆ ಯಶಸ್ವಿಕೂಡ ಆಯಿತು. ಬಳಿಕ 1908ರಲ್ಲಿ ಮೊದಲ ಬಾರಿಗೆ ಸ್ಥಳೀಯ ಪ್ರತಿಭೆಗಳನ್ನೊಳಗೊಂಡಂತೆ ಟೂರ್ನಮೆಂಟ್ ಅನ್ನು ಆಯೋಜಿಸಲಾಯಿತು. ಆದರೇ ದುರಾದೃಷ್ಟವಶಾತ್ ಈ ಟೂರ್ನಮೆಂಟ್ಗೂ ಮುನ್ನವೇ ಬುಚ್ಚಿ ಬಾಬು ಅವರು ನಿಧನ ಹೊಂದಿದರು.