Virat Kohli Ranji: 13 ವರ್ಷಗಳ ಬಳಿಕ ರಣಜಿ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟಿರುವ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ನೋಡಲು ಮೈದಾನಕ್ಕೆ ಬಂದಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದ್ದಾರೆ. ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಬ್ಯಾಟಿಂಗ್ಗೆ ಬಂದ ಕೊಹ್ಲಿ (6) ಸಿಂಗಲ್ ಡಿಜಿಟ್ಗೆ ಪೆವಿಲಿಯನ್ ಸೇರಿದ್ದಾರೆ.
ರೈಲ್ವೇಸ್ ಪರ ಬೌಲಿಂಗ್ ಮಾಡಿದ ಸಾಂಗ್ವಾನ್, ವಿರಾಟ್ ಕೊಹ್ಲಿಯನ್ನು ಕ್ಲೀನ್ ಬೋಲ್ಡ್ ಮಾಡಿದರು. ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡುತ್ತಿದ್ದಾರೆ ಎಂದು ತಿಳಿದು ಸಾವಿರಾರು ಸಂಖ್ಯೆಯಲ್ಲಿ ಜನರು ಮೈದಾನಕ್ಕೆ ಆಗಮಿಸಿದ್ದರು.
ತಮ್ಮ ನೆಚ್ಚಿನ ಆಟಗಾರನ ಬ್ಯಾಟಿಂಗ್ ಕಣ್ತುಂಬಿಕೊಳ್ಳಬೇಕು ಎಂದು ಆಗಮಿಸಿದ್ದ ಅಭಿಮಾನಿಗಳಿಗೆ ಕೊಹ್ಲಿ ನಿರಾಸೆ ಮೂಡಿಸಿದರು.
ಇದರೊಂದಿಗೆ ದೇಶೀಯ ಕ್ರಿಕೆಟ್‌ನಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ವಿರಾಟ್ ಪೆವಿಲಿಯನ್ ತಲುಪುತ್ತಿದ್ದಂತೆ ಕ್ರಿಕೆಟ್ ನೋಡಲು ಆಗಮಿಸಿದ್ದ ಅಭಿಮಾನಿಗಳು ಮೈದಾನ ತೊರೆದರು ಹೊರ ನಡೆಯಲು ಪ್ರಾರಂಭಿಸಿದರು. ಡೆಲ್ಲಿ ತಂಡವು ಪ್ರಸ್ತುತ 79 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 284 ರನ್ ಗಳಿಸಿದೆ.
ತಂಡದ ಪರ ಆಯುಷ್ ಬದೋನಿ 99 ರನ್ ಗಳಿಸಿ 1 ರನ್ನಿಂದ ಶತಕ ವಂಚಿತರಾದರು. ಸುಮಿತ್ ಅರ್ಧಶತಕ ಸಿಡಿಸಿದ್ದಾರೆ. ಇದಕ್ಕೂ ಮೊದಲು ರೈಲ್ವೇಸ್ ಮೊದಲ ಇನ್ನಿಂಗ್ಸ್‌ನಲ್ಲಿ 241 ರನ್ ಗಳಿಸಿ ಆಲೌಟ್ ಆಗಿತ್ತು.
ಕೊಹ್ಲಿಗೆ ಕ್ಲೀನ್ ಬೋಲ್ಡ್ ಮಾಡಿದ ಹಿಮಾಂಶು ಸಾಂಗ್ವಾನ್ ಯಾರು?:ಈ ಪಂದ್ಯದಲ್ಲಿ ಕೊಹ್ಲಿಯನ್ನು ಕ್ಲೀನ್ ಬೋಲ್ಡ್ ಮಾಡಿದ ರೈಲ್ವೇಸ್ ವೇಗಿ ಹಿಮಾಂಶು ಸಾಂಗ್ವಾನ್ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ದೆಹಲಿಯ ನಜಾಫ್‌ಗಢದಲ್ಲಿ ಜನಿಸಿದ ಹಿಮಾಂಶು ಸಾಂಗ್ವಾನ್ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡಿದರು. ಅವರು 2019ರ ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಲಿಸ್ಟ್ Aಗೆ ಪದಾರ್ಪಣೆ ಮಾಡಿದ್ದರು. ಅದರ ನಂತರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಮ್ಮ ಚೊಚ್ಚಲ T20 ಪಂದ್ಯ ಆಡಿದ್ದರು. ಅದೇ ವರ್ಷ ರಣಜಿ ಟ್ರೋಫಿಯಲ್ಲಿ ತಮ್ಮ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.
29 ವರ್ಷದ ಹಿಮಾಂಶು ಸಂಗ್ವಾನ್ ಬಲಗೈ ಮಧ್ಯಮ ವೇಗಿ ಆಗಿದ್ದು ರೈಲ್ವೆಗಾಗಿ ದೇಶೀಯ ಕ್ರಿಕೆಟ್ ಆಡುತ್ತಾರೆ. ದೇಶಿಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 23 ಪಂದ್ಯಗಳನ್ನು ಆಡಿ 3.02ರ ಎಕಾನಮಿಯಲ್ಲಿ 77 ವಿಕೆಟ್ ಪಡೆದಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ 17 ಇನ್ನಿಂಗ್ಸ್ಗಳಲ್ಲಿ 21 ವಿಕೆಟ್ ಉರುಳಿಸಿದ್ದಾರೆ.
ಇದನ್ನೂ ಓದಿ:800ಕ್ಕೂ ಹೆಚ್ಚು ವಿಕೆಟ್, 3 ವಿಶ್ವಕಪ್ ಆಡಿದ್ದ ಸ್ಟಾರ್ ಬೌಲರ್ ಇಂದು ಟ್ಯಾಕ್ಸಿ ಡ್ರೈವರ್!