ವಿಶಾಖಪಟ್ಟಣಂ:ಐಪಿಎಲ್ ಸೊಬಗು ಮತ್ತೊಮ್ಮೆ ಹೊಮ್ಮಿತು. ಕಳೆದ ವಾರವಷ್ಟೇ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಕ್ರಿಕೆಟ್ ರಸದೌತಣ ಉಣಬಡಿಸಿದ ಬೆನ್ನಲ್ಲೇ, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತೊಂದು ಅದ್ಭುತ ಪಂದ್ಯವನ್ನು ಕಟ್ಟಿಕೊಟ್ಟಿತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಬ್ಬರಿಸಿದ ಕೆಕೆಆರ್ ಪಂದ್ಯಾವಳಿಯಲ್ಲಿ ಸತತ ಮೂರನೇ ಗೆಲುವು ಸಾಧಿಸಿತು.
ಸುನಿಲ್ ನರೈನ್, ಅಂಗ್ಕೃಷ್ ರಘುವಂಶಿ, ಆಂಡ್ಯೂ ರಸೆಲ್, ರಿಂಕು ಸಿಂಗ್ರ ಲೀಲಾಜಾಲ ಬ್ಯಾಟಿಂಗ್ನಿಂದಾಗಿ ಕೆಕೆಆರ್ 272 ರನ್ ಗಳಿಸಿತು. ಬೃಹತ್ ಮೊತ್ತ ಕಂಡೇ ಬೆದರಿದ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟದ ಹಂತದಲ್ಲೇ ಮುಗ್ಗರಿಸಿ 166 ರನ್ಗೆ ಆಲೌಟ್ ಆಯಿತು. ಇದರಿಂದ ಕೆಕೆಆರ್ 106 ರನ್ಗಳ ಗೆಲುವು ಸಾಧಿಸಿತು.
ಬೆದರಿದ ರಿಷಭ್ ಪಡೆ:ಐಪಿಎಲ್ ಟೂರ್ನಿಯಲ್ಲಿಯೇ 2ನೇ ಅತ್ಯಧಿಕ ಮೊತ್ತವಾದ 272 ರನ್ ಗುರಿಯನ್ನು ಕಂಡೇ ರಿಷಭ್ ಪಂತ್ ಪಡೆ ಸಣ್ಣಗೆ ಬೆವರಿದಂತಿತ್ತು. 33 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಪ್ರತಿರೋಧದ ಮನೋಭಾವವೇ ಕಳೆದುಕೊಂಡಿತು. ಆರಂಭಿಕ ಡೇವಿಡ್ ವಾರ್ನರ್ 18, ಪೃಥ್ವಿ ಶಾ 10, ಮಿಚೆಲ್ ಮಾರ್ಷ್ ಮತ್ತು ಅಭಿಷೇಕ್ ಪೊರೆಲ್, ಅಕ್ಷರ್ ಪಟೇಲ್ ಸೊನ್ನೆ ಸುತ್ತಿದರೆ, ಸುಮಿತ್ ಕುಮಾರ್ 7 ರನ್ಗೆ ಸುಸ್ತಾದರು.
ಕುಸಿಯುತ್ತಿರುವ ತಂಡಕ್ಕೆ ನಾಯಕ ರಿಷಭ್ ಪಂತ್ ಮತ್ತು ಟ್ರಿಸ್ಟಬ್ ಸ್ಟಬ್ಸ್ ತಲಾ ಅರ್ಧಶತಕ ಬಾರಿಸಿ ಕೆಲ ಹೊತ್ತು ಅಭಿಮಾನಿಗಳನ್ನು ರಂಜಿಸಿದರು. ಪಂತ್ 25 ಎಸೆತಗಳಲ್ಲಿ 55, ಸ್ಟಬ್ಸ್ 32 ಎಸೆತಗಳಲ್ಲಿ 54 ರನ್ ಗಳಿಸಿದರು. ಇವರಿಬ್ಬರೂ ಔಟಾದ ಬಳಿಕ ತಂಡ ಮತ್ತೆ ಕುಸಿದು 17.2 ಓವರ್ಗಳಲ್ಲಿ 166 ರನ್ಗೆ ಆಲೌಟ್ ಆಗಿ ಹೀನಾಯ ಸೋಲೊಪ್ಪಿಕೊಂಡಿತು.
ಸುನಿಲ್ ನರೈನ್ ಅಬ್ಬರ:ಇದಕ್ಕೂ ಮೊದಲು ಕೆರೆಬಿಯನ್ ಆಟಗಾರ ಸುನಿಲ್ ನರೈನ್ ಅಬ್ಬರಿಸಿದರು. ಫಿಲಿಪ್ ಸಾಲ್ಟ್ (18) ಜೊತೆ ಇನಿಂಗ್ಸ್ ಆರಂಭಿಸಿದ ನರೈನ್ ಡೆಲ್ಲಿ ಬೌಲರ್ಗಳನ್ನು ಬೆಂಡತ್ತಿದರು. ಮೂಲೆ ಮೂಲೆಗೂ ಚೆಂಡು ಬಾರಿಸಿ 39 ಎಸತೆಗಳಲ್ಲಿ 85 ರನ್ ಗಳಿಸಿದರು. ಇವರಿಗೆ ಅದ್ಭುತ ಸಾಥ್ ನೀಡಿದ 18ರ ಪ್ರಾಯದ ಅಂಗ್ಕೃಷ್ ರಘುವಂಶಿ 27 ಎಸೆತಗಳಲ್ಲಿ 54 ರನ್ ಚಚ್ಚಿದರು. ಬಳಿಕ ಬಂದ ಆಂಡ್ಯೂ ರಸೆಲ್ 41, ನಾಯಕ ಶ್ರೇಯಸ್ ಅಯ್ಯರ್ 18, ರಿಂಕು ಸಿಂಗ್ 26 ರನ್ ಸಿಡಿಸಿ ತಂಡ ಬೃಹತ್ ಮೊತ್ತ ಕಲೆ ಹಾಕಲು ನೆರವಾದರು.
ವಾರದಲ್ಲಿ ಆರ್ಸಿಬಿ ದಾಖಲೆ ಮುರಿದ 2 ತಂಡಗಳು:ಐಪಿಎಲ್ನಲ್ಲಿ ದಶಕಗಳಿಂದ ದಾಖಲೆಯಾಗಿ ಉಳಿದಿದ್ದ ಆರ್ಸಿಬಿ ಗಳಿಸಿದ್ದ 263 ರನ್ ದಾಖಲೆಯನ್ನು ವಾರದ ಅಂತರದಲ್ಲಿ 2 ತಂಡಗಳು ಅಳಿಸಿ ಹಾಕಿದವು. ಕಳೆದ ವಾರವಷ್ಟೇ ಹೈದರಾಬಾದ್ ಸನ್ರೈಸರ್ಸ್, ಮುಂಬೈ ಇಂಡಿಯನ್ಸ್ ವಿರುದ್ಧ ಸಿಡಿದು ಐಪಿಎಲ್ ಇತಿಹಾಸದಲ್ಲಿಯೇ ಅತ್ಯಧಿಕ ಮೊತ್ತವಾದ 3 ವಿಕೆಟ್ಗೆ 277 ರನ್ ಗಳಿಸಿತು. ಇದೀಗ, ಕೋಲ್ಕತ್ತಾ ನೈಟ್ ರೈಡರ್ಸ್ 7 ವಿಕೆಟ್ಗೆ 272 ರನ್ ಮಾಡಿ 2ನೇ ಅತ್ಯಧಿಕ ರನ್ ದಾಖಲೆ ಮಾಡಿತು.
ಇದನ್ನೂ ಓದಿ:ಸಿಕ್ಸರ್, ಬೌಂಡರಿಗಳ ಸುರಿಮಳೆಗೈದ ಕೆಕೆಆರ್ ಬ್ಯಾಟರ್ಸ್: ಡೆಲ್ಲಿಗೆ 273 ರನ್ಗಳ ಬೃಹತ್ ಟಾರ್ಗೆಟ್! - Kolkata Knight Riders