ತಿರುವನಂತಪುರಂ, ಕೇರಳ: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕೇರಳದ ನಾಲ್ಕು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದ್ದು, ಡಿಸೆಂಬರ್ 2 ರಂದು ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಸೋಮವಾರ ಮಲಪ್ಪುರಂ, ಕೋಯಿಕ್ಕೋಡ್, ವಯನಾಡ್ ಮತ್ತು ಕಣ್ಣೂರುಗಳಲ್ಲಿ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ.
ಕೊಟ್ಟಾಯಂ ಮತ್ತು ಪತ್ತನಂತಿಟ್ಟವನ್ನು "ಆರೆಂಜ್" ಅಲರ್ಟ್‌ನಲ್ಲಿ ಇರಿಸಿದ್ದರೂ, ನಂತರ ಅದನ್ನು "ರೆಡ್ ಅಲರ್ಟ್" ಆಗಿ ಬದಲಾಯಿಸಲಾಗಿದೆ. 24 ಗಂಟೆಗಳಲ್ಲಿ 20 ಸೆಂ.ಮೀ ಗಿಂತ ಹೆಚ್ಚಿನ ಭಾರಿ ಮಳೆ ಸುರಿದರೆ ಅದನ್ನು ರೆಡ್ ಅಲರ್ಟ್ ಎಂದು ಘೋಷಿಸಲಾಗುತ್ತದೆ. ಕಿತ್ತಳೆ ಬಣ್ಣದ ಎಚ್ಚರಿಕೆಯು 11 ಸೆಂ.ಮೀ ನಿಂದ 20 ಸೆಂ.ಮೀ ವರೆಗಿನ ಮಳೆ ಪ್ರಮಾಣವನ್ನು ಸೂಚಿಸುತ್ತದೆ. 6 ಸೆಂ.ಮೀ ಮತ್ತು 11 ಸೆಂ.ಮೀ ನಡುವಣ ಮಳೆ ಪ್ರಮಾಣವನ್ನು ಹಳದಿ ಅಲರ್ಟ್ ಎಂದು ಕರೆಯಲಾಗುತ್ತದೆ.
ನದಿ ಪಾತ್ರದಲ್ಲಿ ಹಾಗೂ ಗುಡ್ಡಗಳ ವ್ಯಾಪ್ತಿಯ ಜನರಿಗೆ ಎಚ್ಚರಿಕೆ: ಏತನ್ಮಧ್ಯೆ, ಪತ್ತನಂತಿಟ್ಟ, ಕೊಟ್ಟಾಯಂ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಅಂಗನವಾಡಿ ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಡಳಿತ ಸೋಮವಾರ ರಜೆ ಘೋಷಿಸಿದೆ. ಭಾರೀ ಮಳೆಯ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು, ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಕೆಎಸ್‌ಡಿಎಂಎ) ಭೂಕುಸಿತ ಮತ್ತು ಮಣ್ಣು ಕುಸಿತದ ಪ್ರದೇಶಗಳಲ್ಲಿ ವಾಸಿಸುವ ಜನರು ಜಾಗರೂಕರಾಗಿರಿ ಮತ್ತು ಅಧಿಕಾರಿಗಳ ನಿರ್ದೇಶನದಂತೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚಿಸಿದೆ.
ನದಿ ದಡದಲ್ಲಿ ಮತ್ತು ಅಣೆಕಟ್ಟು ಜಲಾನಯನ ಪ್ರದೇಶಗಳಲ್ಲಿ ವಾಸಿಸುವವರೂ ಸಹ ಅಧಿಕೃತ ಸೂಚನೆಗಳ ಪ್ರಕಾರ ಸ್ಥಳಾಂತರವಾಗಬೇಕು ಎಂದು SDMA ಹೇಳಿದೆ. ಟ್ರಾಫಿಕ್ ನಿಯಂತ್ರಿಸಲು ಮತ್ತು ಜನರ ಅನಿವಾರ್ಯವಲ್ಲದ ಸಂಚಾರ ನಿರ್ಬಂಧಿಸುವಂತೆ ಪ್ರಾಧಿಕಾರವು ಸಲಹೆ ನೀಡಿದೆ. ಪ್ರಮುಖ ರಸ್ತೆಗಳಲ್ಲಿ ನೀರು ನಿಲ್ಲುವುದು ಮತ್ತು ಗೋಚರತೆ ಕಳಪೆಯಾಗಿರುವುದು ಸಂಚಾರ ದಟ್ಟಣೆಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದೆ.
ತಗ್ಗು ಪ್ರದೇಶಗಳು ಮತ್ತು ನದಿ ದಡಗಳಲ್ಲಿ ಪ್ರವಾಹ, ಮರಗಳು ಬುಡ ಸಮೇತವಾಗಿ ನೆಲಕ್ಕುರುಳುವ ಸಾಧ್ಯತೆಗಳಿದ್ದು, ವಿದ್ಯುತ್ ವಲಯಕ್ಕೆ ಹಾನಿಯಾಗಬಹುದು ಎಂದು ಕೆಎಸ್‌ಡಿಎಂಎ ತಿಳಿಸಿದೆ.
ಇದನ್ನು ಓದಿ:ಫೆಂಗಲ್ ಚಂಡಮಾರುತ: ಕಾರ್ಯಾಚರಣೆ ಪ್ರಾರಂಭಿಸಿದ ಚೆನ್ನೈ ವಿಮಾನ ನಿಲ್ದಾಣ, ವಿದ್ಯುತ್ ಸ್ಪರ್ಶಕ್ಕೆ ಮೂವರು ಸಾವು