ಬೆಂಗಳೂರು: ಭಾರತ ವಿಕಾಸ ಸಂಗಮ ಸಂಸ್ಥೆಯವರು ಆಯೋಜಿಸಿರುವ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸದಿರಲು ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಭಾರತ ವಿಕಾಸ ಸಂಗಮ ಸಂಸ್ಥೆಯವರು ಆಯೋಜಿಸಿರುವ ಭಾರತೀಯ ಸಂಸ್ಕೃತಿ ಉತ್ಸವ ಉದ್ಘಾಟನೆಯ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಮುದ್ರಣವಾಗಿರುವುದನ್ನು ಗಮನಿಸಿದ್ದೇನೆ. ಈ ಬಗ್ಗೆ ನನಗೆ ಅಧಿಕೃತ ಆಹ್ವಾನ ಬಂದಿಲ್ಲ. ಈ ಕಾರ್ಯಕ್ರಮ ಆಯೋಜಿಸಿರುವ ಸಂಸ್ಥೆಯ ಹಿನ್ನೆಲೆಯ ವಿವರವನ್ನು ತರಿಸಿ ಪರಿಶೀಲಿಸಿದ ನಂತರ ಅದರಲ್ಲಿ ಭಾಗವಹಿಸದೇ ಇರಲು ತೀರ್ಮಾನಿಸಿದ್ದೇನೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ಭಾರತ ವಿಕಾಸ ಸಂಗಮ ಸಂಸ್ಥೆಯವರು ಆಯೋಜಿಸಿರುವ ಭಾರತೀಯ ಸಂಸ್ಕೃತಿ ಉತ್ಸವ ಉದ್ಘಾಟನೆಯ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಮುದ್ರಣವಾಗಿರುವದನ್ನು ಗಮನಿಸಿದ್ದೇನೆ.
— Siddaramaiah (@siddaramaiah) December 1, 2024
ಈ ಬಗ್ಗೆ ನನಗೆ ಅಧಿಕೃತ ಆಹ್ವಾನ ಬಂದಿಲ್ಲ.
ಈ ಕಾರ್ಯಕ್ರಮವನ್ನು ಆಯೋಜಿಸಿರುವ ಸಂಸ್ಥೆಯ ಹಿನ್ನೆಲೆಯ ವಿವರವನ್ನು ತರಿಸಿ ಪರಿಶೀಲಿಸಿದ ನಂತರ ಅದರಲ್ಲಿ ಭಾಗವಹಿಸದೆ ಇರಲು…
ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಜ.29 ರಿಂದ ಫೆ. 6ರವರೆಗೆ 'ಭಾರತೀಯ ಸಂಸ್ಕೃತಿ ಉತ್ಸವ–7' ನಡೆಸಲು ಉದ್ದೇಶಿಲಾಗಿದೆ. ಭಾರತ ವಿಕಾಸ ಸಂಗಮ, ಕಲಬುರಗಿಯ ವಿಕಾಸ ಅಕಾಡೆಮಿ, ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಜಂಟಿ ಸಹಯೋಗದಲ್ಲಿ ಈ ಉತ್ಸವ ನಡೆಯುತ್ತಿದೆ. ಈ ಸಂಬಂಧ 52 ಪುಟಗಳ ಆಮಂತ್ರಣ ಪತ್ರಿಕೆ ಈಗಾಗಲೇ ಬಿಡುಗಡೆಗೊಂಡಿದೆ. ಜ.29ರಂದು ಬೆಳಗ್ಗೆ ನಡೆಯಲಿರುವ ಮಾತೃ ಸಮಾವೇಶ – 'ಮಾತೃ ದೇವೋಭವ'ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ ಎಂದು ಆಮಂತ್ರಣ ಪತ್ರಿಕೆಯಲ್ಲಿದೆ.
ಕೆ.ಎನ್. ಗೋವಿಂದಾಚಾರ್ಯ ಅವರು ಭಾರತ ವಿಕಾಸ ಸಂಗಮದ ಸಂಸ್ಥಾಪಕರಾಗಿದ್ದು, ಕಲಬುರಗಿಯ ವಿಕಾಸ ಅಕಾಡೆಮಿಯ ಅಧ್ಯಕ್ಷರೂ ಆಗಿರುವ ರಾಜ್ಯಸಭೆ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ಇದರ ಸಂರಕ್ಷಕರಾಗಿದ್ದಾರೆ.
ಸಚಿವ ಪ್ರಿಯಾಂಕ ಖರ್ಗೆಯಿಂದಲೂ ತಿರಸ್ಕಾರ: ಈ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಚಿವ ಪ್ರಿಯಾಂಕ ಖರ್ಗೆ, ಭಾರತ ವಿಕಾಸ ಸಂಗಮ ಸಂಸ್ಥೆ ಆಯೋಜಿಸಿರುವ ಭಾರತೀಯ ಸಂಸ್ಕೃತಿ ಉತ್ಸವ ಎಂಬ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಮುದ್ರಣವಾಗಿರುವುದನ್ನು ಮಾಧ್ಯಮಗಳ ಮೂಲಕ ಗಮನಿಸಿದೆ. ನನಗೆ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ಇಲ್ಲ, ನನಗೆ ಆಹ್ವಾನವೂ ಬಂದಿಲ್ಲ. ನನಗೆ ಆಹ್ವಾನ ನೀಡದೆಯೇ ನನ್ನ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿ ಹಂಚುವುದು ಸಮಂಜಸವಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕ್ರೀಡಾ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಹಾಜರಾತಿ, 10 ಗ್ರೇಸ್ ಮಾರ್ಕ್ ನೀಡುವ ಬಗ್ಗೆ ಪರಿಶೀಲನೆ: ಸಿಎಂ ಭರವಸೆ