ಗ್ರಾಸ್ ಐಲೆಟ್ (ಸೇಂಟ್ ಲೂಸಿಯಾ):ಇಲ್ಲಿನ ಡರೆನ್ ಸಮಿ ರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ನ ಸೂಪರ್ - 8 ಹಣಾಹಣಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಹಾಲಿ ಚಾಂಪಿಯನ್ ಇಂಗ್ಲೆಂಡ್ ಅಮೋಘ 8 ವಿಕೆಟ್ಗಳ ಗೆಲುವು ದಾಖಲಿಸಿದೆ. ಬೃಹತ್ ಮೊತ್ತ ಬೆನ್ನಟ್ಟಿದ ಆಂಗ್ಲರಿಗೆ ಫಿಲ್ ಸಾಲ್ಟ್ ಅಬ್ಬರದ ಅರ್ಧಶತಕ ಸಿಡಿಸಿ ಗೆಲುವನ್ನು ಸುಲಭವಾಗಿಸಿದರು.
ವಿಂಡೀಸ್ ನೀಡಿದ 181 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ಗೆ ಫಿಲ್ ಸಾಲ್ಟ್ (87) ಹಾಗೂ ನಾಯಕ ಜೋಸ್ ಬಟ್ಲರ್ (25) 67 ರನ್ ಸೇರಿಸಿದರು. ಈ ಹಂತದಲ್ಲಿ ರೋಸ್ಟನ್ ಚೇಸ್ ಬೌಲಿಂಗ್ನಲ್ಲಿ ಬಟ್ಲರ್ ಎಲ್ಬಿ ಬಲೆಗೆ ಬಿದ್ದರು. ಬಳಿಕ ಬಂದ ಮೋಯಿನ್ ಅಲಿ ಎರಡು ಬೌಂಡರಿ ಸಹಿತ 13 ರನ್ ಬಾರಿಸಿ ರಸೆಲ್ ಬೌಲಿಂಗ್ನಲ್ಲಿ ಚಾರ್ಲ್ಸ್ಗೆ ಕ್ಯಾಚಿತ್ತು ಹೊರನಡೆದರು. 10.1 ಓವರ್ಗಳಲ್ಲಿ ಇಂಗ್ಲೆಂಡ್ 84 ರನ್ಗೆ 2 ವಿಕೆಟ್ ಕಳೆದುಕೊಂಡಿತ್ತು.
ಇದಾದ ಬಳಿಕ ಒಂದಾದ ಫಿಲ್ ಸಾಲ್ಟ್ ಹಾಗೂ ಜಾನಿ ಬೈರ್ಸ್ಟೋ ವಿಂಡೀಸ್ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡಿದರು. ಮುಂದಿನ 7.2 ಓವರ್ಗಳಲ್ಲೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಅರ್ಧಶತಕದ ಬಳಿಕ ಅಬ್ಬರಿಸಿದ ಸಾಲ್ಟ್ 47 ಎಸೆತಗಳಲ್ಲಿ ಅಜೇಯ 87 ರನ್ ಬಾರಿಸಿದರೆ, ಬೈರ್ಸ್ಟೋ 26 ಬಾಲ್ಗೆ 48 ರನ್ ಚಚ್ಚಿದರು. ಈ ಜೋಡಿ ಅಜೇಯ 97 ರನ್ ಜೊತೆಯಾಟವಾಡಿ ವಿಂಡೀಸ್ಗೆ 17.3 ಓವರ್ಗಳಲ್ಲೇ ಸೋಲುಣಿಸಿತು. ಈ ಜಯದೊಂದಿಗೆ ಹಾಲಿ ಚಾಂಪಿಯನ್ನರು ಸೂಪರ್-8 ಹಂತದಲ್ಲಿ ಭರ್ಜರಿ ಆರಂಭ ಪಡೆದರು.