ಕರ್ನಾಟಕ

karnataka

ETV Bharat / sports

ಟಿ20 ವಿಶ್ವಕಪ್​: ಕೆನಡಾ ಕ್ರಿಕೆಟ್​ ತಂಡದಲ್ಲಿ ದಾವಣಗೆರೆಯ ಹುಡುಗ - Shreyas Moa - SHREYAS MOA

ದಾವಣಗೆರೆಯ ಯುವಕ ಕೆನಡಾದಲ್ಲಿ ವ್ಯಾಸಂಗಕ್ಕೆ ತೆರಳಿ ಅಲ್ಲಿನ ರಾಷ್ಟ್ರೀಯ ಕ್ರಿಕೆಟ್​ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ನಾಳೆಯಿಂದ ಆರಂಭವಾಗಲಿರುವ ಟಿ20 ವಿಶ್ವಕಪ್​ನಲ್ಲಿ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ.

ಕೆನಡಾ ಕ್ರಿಕೆಟ್​ ತಂಡದಲ್ಲಿ ದಾವಣಗೆರೆಯ ಹುಡುಗ
ಕೆನಡಾ ಕ್ರಿಕೆಟ್​ ತಂಡದಲ್ಲಿ ದಾವಣಗೆರೆಯ ಹುಡುಗ (ETV Bharat)

By ETV Bharat Karnataka Team

Published : Jun 1, 2024, 10:56 PM IST

ಶ್ರೇಯಸ್​ ಬಗ್ಗೆ ತಂದೆ, ತಾಯಿ ಮತ್ತು ಕೋಚ್​ರ ಮಾತುಗಳು (ETV Bharat)

ದಾವಣಗೆರೆ:ಜಿಲ್ಲೆಯ ಯುವಕನೊಬ್ಬ ಕೆನಡಾ ಕ್ರಿಕೆಟ್​ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಭಾನುವಾರದಿಂದ ಆರಂಭವಾಗಲಿರುವ ಟಿ20 ವಿಶ್ವಕಪ್​ನಲ್ಲಿ ಅವರು ಕೆನಡಾ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ. ಈ ಹಿಂದೆ ಬೆಣ್ಣೆ ನಗರಿಯಿಂದ ವಿನಯ್​ಕುಮಾರ್​ ಕ್ರಿಕೆಟ್​​ನಲ್ಲಿ ಛಾಪು ಮೂಡಿಸಿದ್ದರೆ, ಇದೀಗ ಆ ಸರದಿ ಶ್ರೇಯಸ್​ ಮೋವಾ ಅವರದ್ದು.

ಹೌದು, ನಗರದ ಶಿವಕುಮಾರಸ್ವಾಮಿ ಬಡಾವಣೆಯ ನಿವಾಸಿ ಎಂ.ಜಿ ವಾಸುದೇವರೆಡ್ಡಿ ಮತ್ತು ಎನ್.ಯಶೋಧ ದಂಪತಿಯ ಪುತ್ರ ಶ್ರೇಯಸ್ ಮೋವಾ ಅವರು ಕೆನಡಾ ರಾಷ್ಟ್ರೀಯ ತಂಡದ ಸದಸ್ಯ. ಟಿ20 ವಿಶ್ವಕಪ್​ನಲ್ಲಿ ಅವರು ಕೆನಡಾದ ಪರವಾಗಿ ಆಡಲಿದ್ದಾರೆ. ಭಾನುವಾರ ಆತಿಥೇಯ ಅಮೆರಿಕ ವಿರುದ್ಧದ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

ಶ್ರೇಯಸ್ ಮೋವಾ ಅವರು ದಾವಣಗೆರೆ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಆಟಗಾರ. ಅಕಾಡೆಮಿಯಲ್ಲಿ ಪಿ.ವಿ. ನಾಗರಾಜ್ ಅವರ ಬಳಿ ತರಬೇತಿ ಪಡೆದುಕೊಂಡಿದ್ದಾರೆ. ಲೆದರ್ ಕ್ರಿಕೆಟ್ ಕೋಚ್ ತಿಮ್ಮಣ್ಣ ಅವರೂ ಶ್ರೇಯಸ್​ಗೆ ಕ್ರಿಕೆಟ್​ ಪಾಠ ಮಾಡಿದ್ದಾರೆ. ಶ್ರೇಯಸ್ ಅವರು 2006 ರಲ್ಲಿ ದಾವಣಗೆರೆ ಕ್ರಿಕೆಟ್ ಅಕಾಡೆಮಿಯಲ್ಲಿ ಟ್ರೇನಿಂಗ್​ ಪಡೆದಿದ್ದರು. ಬಳಿಕ, ರಾಜ್ಯ ಕ್ರಿಕೆಟ್ ಸಂಸ್ಥೆ ನಡೆಸುವ ಅಂತರ್‌ರಾಜ್ಯದ 19 ವರ್ಷದೊಳಗಿನ ಹಾಗೂ 16 ವರ್ಷದೊಳಗಿನ ಪಂದ್ಯಾವಳಿಗಳಿಗೆ ಆಯ್ಕೆಯಾಗಿದ್ದರು. ಇದಲ್ಲದೆ ತುಮಕೂರು ಕ್ರಿಕೆಟ್ ವಲಯದ ಸಂಚಾಲಕರಾದ ಕೆ. ಶಶಿಧರ್‌ ಅವರ ವೀನಸ್ ಕ್ರಿಕೆಟ್ ಕ್ಲಬ್ ಅನ್ನು ಸುಮಾರು ವರ್ಷಗಳ ಕಾಲ ಪ್ರತಿನಿಧಿಸಿದ್ದಾರೆ.

ವ್ಯಾಸಂಗಕ್ಕೆ ತೆರಳಿ ಕ್ರಿಕೆಟ್​ ತಂಡ ಸೇರ್ಪಡೆ:ಶ್ರೇಯಸ್ ಮೋವಾ ಅವರು ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಮುಗಿಸಿ ಎಂಎಸ್ ಮಾಡಲು ಕೆನಡಾಕ್ಕೆ ತೆರಳಿದ್ದರು. ಅಲ್ಲಿ ವ್ಯಾಸಂಗ ಮಾಡುತ್ತಾ ಕ್ರಿಕೆಟ್​ನಲ್ಲಿ ತೊಡಗಿಸಿಕೊಂಡು ಅಲ್ಲಿನ ಕ್ರಿಕೆಟ್ ಬೋರ್ಡ್​ನ ಕಣ್ಣಿಗೆ ಬಿದ್ದಿದ್ದರು. ಉತ್ತಮ ಬ್ಯಾಟಿಂಗ್ ಕೌಶಲ್ಯ ಹೊಂದಿರುವ ಶ್ರೇಯಸ್ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗಿದೆ. ವಿಕೆಟ್​ ಕೀಪರ್ ಕೂಡ ಆಗಿರುವ ಅವರು ಇದೀಗ ವಿಶ್ವಕಪ್​ ತಂಡದಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಕೆನಡಾದಲ್ಲಿ ಮಂಜು ಬೀಳುವ ಕಾರಣ 6 ತಿಂಗಳು ಕ್ರಿಕೆಟ್​ ಆಡಿದರೆ, ಇನ್ನಾರು ತಿಂಗಳು ವಿರಾಮ. ಆದರೆ, ಅಲ್ಲಿನ ಕೋಚ್​ಗಳು ತಂಡ ವನ್ನು ಬೇರೆ ದೇಶಕ್ಕೆ ಕರೆದೊಯ್ದು ಕ್ರಿಕೆಟ್​ ಅಭ್ಯಾಸ ನಡೆಸುತ್ತಾರೆ. ತಮ್ಮ ಮಗ ಓದಿನೊಂದಿಗೆ ಕ್ರಿಕೆಟ್​ನಲ್ಲಿ ಬದುಕು ಕಂಡುಕೊಂಡು, ದೇಶವನ್ನು ಪ್ರತಿನಿಧಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವುದು ಸಂತಸ ತಂದಿದೆ ಎನ್ನುತ್ತಾರೆ ಶ್ರೇಯಸ್ ಅವರ ತಂದೆ ವಾಸುದೇವರೆಡ್ಡಿ.

ತಮ್ಮ ಪುತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾನೆ. ಚಿಕ್ಕ ವಯಸ್ಸಿನಿಂದಲೂ ಆತ ಕ್ರಿಕೆಟ್​ನಲ್ಲಿ ಶ್ರದ್ಧೆ ಹೊಂದಿದ್ದ. ಇದೀಗ ದೊಡ್ಡ ಅವಕಾಶ ಸಿಕ್ಕಿದೆ. ದೊಡ್ಡ ಯಶಸ್ಸೂ ಸಿಗಲಿ. ಕೆನಡಾ ತಂಡದ ಉಪನಾಯಕನೂ ಆಗಿದ್ದಾನೆ. ನಮಗೆ ಅತಿ ಸಂತೋಷವಿದೆ ಎಂದು ಶಿಕ್ಷಕಿಯಾಗಿರುವ ತಾಯಿ ಯಶೋಧ ಅವರು ಪುತ್ರನ ಸಾಧನೆ ಹೊಗಳಿದರು.

ಇದನ್ನೂ ಓದಿ:ಒಂದೊಮ್ಮೆ ಅರ್ಜಿ ಹಾಕಿದ್ದರೆ, ಟೀಂ ಇಂಡಿಯಾ ಕೋಚ್​ ಹುದ್ದೆಗೆ ಗಂಭೀರ್​ ಉತ್ತಮ ಆಯ್ಕೆ: ಸೌರವ್​ ಗಂಗೂಲಿ​ - Sourav Ganguly Statement

ABOUT THE AUTHOR

...view details