ಟೊರಾಂಟೊ(ಕೆನಡಾ):ಭಾರತದ ಸಾಂಪ್ರದಾಯಿಕ ಕ್ರೀಡೆಯಾದ ಚದುರಂಗದಾಟದಲ್ಲಿ (ಚೆಸ್) ಮತ್ತೊಂದು ಉದಯೋನ್ಮುಖ ತಾರೆ ಮಿನುಗಿದೆ. ಕೆನಡಾದಲ್ಲಿ ನಡೆದ 'ಫಿಡೆ ಕ್ಯಾಂಡಿಡೇಟ್ಸ್' ಚೆಸ್ ಟೂರ್ನಿಯನ್ನು ಭಾರತದ 17 ವರ್ಷದ ಗ್ರ್ಯಾಂಡ್ ಮಾಸ್ಟರ್ ಗುಕೇಶ್ ದೊಮ್ಮರಾಜು ಗೆದ್ದುಕೊಂಡರು. ಈ ಮೂಲಕ 'ಅತಿ ಕಿರಿಯ ಚಾಂಪಿಯನ್' ಎಂಬ ದಾಖಲೆಯನ್ನೂ ಬರೆದರು.
13ನೇ ಸುತ್ತಿನವರೆಗೂ 8.5 ಅಂಕ ಗಳಿಸಿದ್ದ ಗುಕೇಶ್ 14ನೇ ಸುತ್ತಿನಲ್ಲಿ ಅಮೆರಿಕದ ಹಿಕಾರು ನಕಾಮುರಾ ವಿರುದ್ಧ ಡ್ರಾ ಸಾಧಿಸಿ 9 ಅಂಕ ಸಂಪಾದಿಸಿದರು. ಇನ್ನೊಂದೆಡೆ, ರಷ್ಯಾದ ನೆಪೊಮ್ನೇಷಿಯಾ ಮತ್ತು ಅಮೆರಿಕದ ಫ್ಯಾಬಿಯಾನೊ ಕರುವಾನಾ ನಡುವಿನ ಪಂದ್ಯವೂ ಡ್ರಾಗೊಂಡಿತು. ಆದರೆ, ಇಬ್ಬರೂ 8.5 ಅಂಕ ಗಳಿಸಿದರು. ಇದರಿಂದ ಭಾರತದ ಗ್ರ್ಯಾಂಡ್ ಮಾಸ್ಟರ್ ವಿಜೇತರಾದರು.
ಚೆಸ್ ಇತಿಹಾಸದಲ್ಲೇ ಮೊದಲು:ಭಾರತದ ಗ್ರ್ಯಾಂಡ್‌ಮಾಸ್ಟರ್ ಗುಕೇಶ್ ಚೆಸ್ ಇತಿಹಾಸದಲ್ಲೇ ಅದ್ಭುತ ಸೃಷ್ಟಿಸಿದ್ದಾರೆ. ಹಾಲಿ ಚಾಂಪಿಯನ್ ಆಟಗಾರರೊಬ್ಬರಿಗೆ ಚಾಲೆಂಜರ್ (ಸವಾಲಿಗ) ಆದ ಅತಿ ಕಿರಿಯ ಆಟಗಾರ ಎಂಬ ಅಭಿದಾನಕ್ಕೆ ಪಾತ್ರರಾದರು. ಈವರೆಗೂ ಯಾವೊಬ್ಬ ಕಿರಿಯ ಆಟಗಾರನೂ ಮಾಡಿರದ ಸಾಧನೆ ಇದು.
ಈ ಗೆಲುವಿನೊಂದಿಗೆ ಗುಕೇಶ್ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಹೋರಾಟಕ್ಕೆ ಅರ್ಹತೆ ಪಡೆದರು. ವರ್ಷದ ಕೊನೆಯಲ್ಲಿ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿ ನಡೆಯಲಿದ್ದು, ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಅವರಿಗೆ ಭಾರತದ ಗ್ರ್ಯಾಂಡ್ ಮಾಸ್ಟರ್ ಸವಾಲೊಡ್ಡಲಿದ್ದಾರೆ. ಆ ಸ್ಪರ್ಧೆಯನ್ನೂ ಗೆದ್ದರೆ ಚಾಂಪಿಯನ್ ಶಿಪ್ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಸೃಷ್ಟಿಸುವ ಅವಕಾಶವಿದೆ. ಚದುರಂಗದಾಟದ ಚತುರರಾದ ಮ್ಯಾಗ್ನಸ್ ಕಾರ್ಲ್ಸನ್ ಮತ್ತು ಕಾಸ್ಪರೋವ್ ಅವರು 22ನೇ ವಯಸ್ಸಿನಲ್ಲಿ ಚಾಂಪಿಯನ್ ಆಗಿದ್ದರು.