ನವದೆಹಲಿ: ಕಳೆದ ಎರಡು ದಶಕಗಳಿಂದ ಫುಟ್ಬಾಲ್ನಲ್ಲಿ ಮಿಂಚು ಹರಿಸುತ್ತಿರುವ ಪೋರ್ಚುಗಲ್‌ನ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಇದೀಗ ಯೂಟ್ಯೂಬ್ ಪ್ರವೇಶಿಸಿದ್ದಾರೆ. ಬುಧವಾರ ಅವರು ತಮ್ಮ ಹೊಸ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಖಾತೆ ತೆರೆದ ಕೆಲವೇ ನಿಮಿಷಗಳಲ್ಲಿ ಚಾನೆಲ್ ಹೆಚ್ಚಿನ ಚಂದಾದಾರರನ್ನು ಪಡೆದಿದ್ದು, ವಿಶ್ವದ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ.
90 ನಿಮಿಷಗಳಲ್ಲಿ 10 ಲಕ್ಷ ಚಂದಾದಾರರು:ರೊನಾಲ್ಡೊ ಯೂಟ್ಯೂಬ್ ಚಾನೆಲ್ ತೆರೆದ 90 ನಿಮಿಷಗಳಲ್ಲೇ ಅವರ ಖಾತೆಗೆ 1 ಮಿಲಿಯನ್ ಅಂದರೆ 10 ಲಕ್ಷ ಜನರು ಸಬ್ಸ್ಕ್ರೈಬ್ ಆಗಿದ್ದಾರೆ. ಇದರೊಂದಿಗೆ ಯೂಟ್ಯೂಬ್‌ನಲ್ಲಿ ಚಾನೆಲ್ ಆರಂಭಿಸಿ ಒಂದೂವರೆ ಗಂಟೆಯಲ್ಲಿ ದೊಡ್ಡ ಮೊತ್ತದ ಚಂದಾದಾರರನ್ನು ಪಡೆದ ಮೊದಲ ಚಾನೆಲ್ ಎಂಬ ದಾಖಲೆಯನ್ನೂ ಬರೆದಿದ್ದಾರೆ. ರೊನಾಲ್ಡೊ ಫುಟ್ಬಾಲ್ ಆಟದ ತೆರೆಯ ಹಿಂದಿನ ಕಥೆಗಳೂ ಸೇರಿದಂತೆ ಅವರ ಜೀವನದ ಸ್ವಾರಸ್ಯಕರ ವಿಚಾರಗಳನ್ನು ಈ ಚಾನೆಲ್ ಮೂಲಕ ಅಭಿಮಾನಿಗಳೆದುರು ಅನಾವರಣಗೊಳಿಸಲಿದ್ದಾರೆ.
ರೊನಾಲ್ಡೊ ಚಾನೆಲ್ 24 ಗಂಟೆಗಳಲ್ಲಿ 15 ಮಿಲಿಯನ್ ಚಂದಾದಾರರನ್ನು ಪಡೆದಿದೆ. ಇದಕ್ಕೂ ಮುನ್ನ ಈ ಫುಟ್ಬಾಲ್ ತಾರೆ ತಮ್ಮ 'ಎಕ್ಸ್' ಖಾತೆಯಲ್ಲಿ ಯೂಟ್ಯೂಬ್ ಚಾನೆಲ್ ಪ್ರಾರಂಭಿಸುವುದಾಗಿ ಘೋಷಿಸಿದ್ದರು. 'ಎಕ್ಸ್'ನಲ್ಲೂ ರೊನಾಲ್ಡೊ ಹೆಚ್ಚಿನ ಅನುಯಾಯಿಗಳನ್ನು ಹೊಂದಿದ್ದಾರೆ. ರೊನಾಲ್ಡೊ 'ಎಕ್ಸ್' ಪ್ಲಾಟ್‌ಫಾರ್ಮ್‌ನಲ್ಲಿ 112.6 ಮಿಲಿಯನ್ ಫಾಲೋವರ್ಸ್, ಫೇಸ್‌ಬುಕ್‌ನಲ್ಲಿ 170 ಮಿಲಿಯನ್ ಫಾಲೋವರ್ಸ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 636 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಯೂಟ್ಯೂಬ್ ಚಾನೆಲ್ ಆರಂಭಿಸುವುದಕ್ಕೂ ಮುನ್ನ ರೊನಾಲ್ಡೋ ತಮ್ಮ 'ಎಕ್ಸ್' ಖಾತೆಯಲ್ಲಿ, 'ಕಾಯುವಿಕೆ ಮುಗಿದಿದೆ. ಅಂತಿಮವಾಗಿ ಇಲ್ಲಿದೆ ನನ್ನ ಹೊಸ ಯೂಟ್ಯೂಬ್ ಚಾನೆಲ್. ಇದಕ್ಕೆ ಚಂದಾದಾರರಾಗಿ. ಹೊಸ ಪ್ರಯಾಣದಲ್ಲಿ ನನ್ನೊಂದಿಗೆ ಭಾಗಿಯಾಗಿ' ಎಂದು ತಮ್ಮ ಅನುಯಾಯಿಗಳಿಗೆ ತಿಳಿಸಿದ್ದರು.