ICC Champions Trophy India Wicket Keeper: ಮುಂದಿನ ವಾರದಿಂದ ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಪ್ರಾರಂಭವಾಗಲಿದೆ. 7 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿದೆ. ಈ ಹಿಂದೆ 2017ರಲ್ಲಿ ಈ ಟೂರ್ನಿ ನಡೆದಿತ್ತು. ಈ ಬಾರಿಯ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿಕೊಳ್ಳುತ್ತಿದೆ. ಆದರೆ ಭದ್ರತಾ ಸಮಸ್ಯೆಯಿಂದಾಗಿ ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ.
ಕಪ್ ಗೆಲ್ಲುವ ಫೆವರೀಟ್ ತಂಡಗಳಲ್ಲಿ ಭಾರತ ಕೂಡ ಒಂದಾಗಿದೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಏಕದಿನ ಸರಣಿಯಲ್ಲಿ 3-0 ಅಂತರದಿಂದ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿರುವ ಭಾರತ ಚಾಂಪಿಯನ್ಸ್ ಟ್ರೋಫಿಗೆ ಎಲ್ಲಾ ರೀತಿಯಿಂದಲೂ ಸಜ್ಜಾಗಿದೆ ಎಂದು ಸೂಚನೆ ನೀಡಿದೆ.
ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪ್ಲೇಯಿಂಗ್ ಇಲೆವೆನ್ ಹೇಗಿರುತ್ತದೆ. ಇಂಗ್ಲೆಂಡ್ ವಿರುದ್ಧ ಆಡಿರುವ ಆಟಗಾರರೇ ಅಂತಿಮ ತಂಡದಲ್ಲಿರಲಿದ್ದಾರ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಅದರಲ್ಲೂ ಯುವ ಆಟಗಾರ ರಿಷಭ್ ಪಂತ್ ವಿಕೆಟ್ ಕೀಪರ್-ಕಮ್-ಬ್ಯಾಟ್ಸ್‌ಮನ್ ಆಗಿ, ತಂಡದಲ್ಲಿ ಸ್ಥಾನ ಪಡೆಯುತ್ತಾರೆಯೇ? ಅಥವಾ ಇಂಗ್ಲೆಂಡ್ ಸರಣಿ ಆಡಿರುವ ಕೆ.ಎಲ್. ರಾಹುಲ್ ಅವರನ್ನೆ ಇಲ್ಲಿಯೂ ಕೀಪರ್ ಆಗಿ ಮುಂದುವರೆಸಲಾಗುತ್ತದೆ? ಎಂಬ ಚರ್ಚೆಗಳು ವ್ಯಾಪಕವಾಗಿ ನಡೆದಿವೆ. ಈ ಇಬ್ಬರಲ್ಲಿ ಯಾರು ವಿಕೆಟ್ ಕೀಪರ್ ಮತ್ತು ಬ್ಯಾಟರ್ ಆಗಿ ಅಂತಿಮ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂಬುದರ ಬಗ್ಗೆ ಮುಖ್ಯ ಕೋಚ್ ಗಂಭೀರ್ ಸ್ಪಷ್ಟನೆ ನೀಡಿದ್ದಾರೆ.
ಕೋಚ್ ಗಂಭೀರ್ ಸ್ಪಷ್ಟನೆ:ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಯಾರಾಗಲಿದ್ದಾರೆ ಎಂಬುದಕ್ಕೆ ಗಂಭೀರ್ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಮೊದಲ ಆಯ್ಕೆಯ ವಿಕೆಟ್ ಕೀಪರ್ ಕೆಎಲ್ ರಾಹುಲ್ ಆಗಿದ್ದಾರೆ. ರಾಹುಲ್ ಸದ್ಯ ಬೆಸ್ಟ್ ಕೀಪರ್ ಕಮ್ ಬ್ಯಾಟರ್ ಆಗಿದ್ದಾರೆ. ಆದರೂ ಪಂತ್ಗೆ ಯಾವುದೇ ಕ್ಷಣದಲ್ಲೂ ಅವಕಾಶ ಸಿಗಬಹುದು ಎಂದು ತಿಳಿಸಿದ್ದಾರೆ.
ಸದ್ಯ, ರಾಹುಲ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಒಂದೇ ಪಂದ್ಯದಲ್ಲಿ ಇಬ್ಬರು ವಿಕೆಟ್ ಕೀಪರ್-ಕಮ್-ಬ್ಯಾಟ್ಸ್‌ಮನ್‌ಗಳೊಂದಿಗೆ ಆಡಲು ಸಾಧ್ಯವಿಲ್ಲ ಎಂದರು. ಬಳಿಕ ರಾಹುಲ್ ಅವರನ್ನು ಐದನೇ ಸ್ಥಾನದಲ್ಲಿ ಆಡಿಸಲಾಗುತ್ತದೆಯೇ? ಎಂಬುದರ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದು, ಇದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಯಾವುದೇ ಆಟಗಾರನು ಐದನೇ ಸ್ಥಾನದಲ್ಲಿ ಆಡಬಹುದು. ಆಟಗಾರನ ಹಿತಾಸಕ್ತಿಗಿಂತ ತಂಡದ ಹಿತಾಸಕ್ತಿ ಮುಖ್ಯ. ಆ ಸಮಯದಲ್ಲಿ ದಾಖಲೆಗಳನ್ನು ನೋಡಿ ಬಳಿಕ ನಿರ್ಧರಿಸಲಾಗುತ್ತದೆ ಎಂದು ಗಂಭೀರ್ ಹೇಳಿದರು.
ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ:ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್. ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜ, ವರುಣ್ ಚಕ್ರವರ್ತಿ.
ಇದನ್ನೂ ಓದಿ:ಇಂದು RCB vs GG ಮೊದಲ ಫೈಟ್: ಪಂದ್ಯ ಉಚಿತವಾಗಿ ವೀಕ್ಷಣೆಗೆ ಹೀಗೆ ಮಾಡಿ!