Cheteshwara pujara Creat new record: ರಣಜಿ ಟ್ರೋಫಿ ಪಂದ್ಯದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಭರ್ಜರಿ ಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ. ಛತ್ತೀಸ್‌ಗಢ ಮತ್ತು ಸೌರಾಷ್ಟ್ರ ತಂಡಗಳ ಮಧ್ಯೆ ನಡೆದ ಈ ಪಂದ್ಯದಲ್ಲಿ ಪೂಜಾರ 197 ಎಸೆತಗಳನ್ನು ಎದುರಿಸಿ ಶತಕ ಪೂರೈಸಿದರು.
ಉಭಯ ತಂಡಗಳ ನಡುವಿನ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಛತ್ತೀಸ್‌ಗಢ 578 ರನ್‌ಗಳ ಬೃಹತ್ ಸ್ಕೋರ್ ದಾಖಲಿಸಿತು. ನಂತರ ಬ್ಯಾಟಿಂಗ್‌ಗೆ ಬಂದ ಸೌರಾಷ್ಟ್ರ 81 ರನ್ಗಳಿಗೆ ಆರಂಭಿಕ 2 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಪೂಜಾರ ತಮ್ಮ ತಂಡದ ಪರವಾಗಿ ಶತಕ ಗಳಿಸಿದರು. ಇದು ರಣಜಿ ಟ್ರೋಫಿಯಲ್ಲಿ ಅವರ 25ನೇ ಶತಕವಾಗಿದ್ದು, ಅಲ್ಲದೇ ಪ್ರಥಮ ದರ್ಜೆ ವೃತ್ತಿಜೀವನದ 66ನೇ ಶತಕವಾಗಿದೆ. ಪೂಜಾರ ಈ ಶತಕದ ಮೂಲಕ ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿದ್ದಾರೆ ದಾಖಲೆ ಬರೆದಿದ್ದಾರೆ. ಲಾರಾ ಪ್ರಥಮ ದರ್ಜೆಯ ಕ್ರಿಕೆಟ್ನಲ್ಲಿ ಒಟ್ಟು 65 ಶತಕಗಳನ್ನು ಗಳಿಸಿದ್ದರು.
21 ಸಾವಿರ ರನ್:ಛತ್ತೀಸ್‌ಗಢ ವಿರುದ್ಧದ ಶತಕದೊಂದಿಗೆ ಪ್ರಥಮ ದರ್ಜೆಯಲ್ಲಿ ಪೂಜಾರ 21 ಸಾವಿರ ರನ್ಗಳನ್ನು ಪೂರೈಸಿದರು. ಪೂಜಾರ ಇದೀಗ ಪ್ರಥಮ ದರ್ಜೆಯಲ್ಲಿ ಅತಿ ಹೆಚ್ಚು ರನ್ ಗಳಿಸಿದ 4ನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಸುನಿಲ್ ಗವಾಸ್ಕರ್ ಮೊದಲ ಸ್ಥಾನದಲ್ಲಿದ್ದು, ಪ್ರಥಮ ದರ್ಜೆಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಆಗಿದ್ದಾರೆ. ಅವರು ಒಟ್ಟು 25834 ರನ್ ಗಳಿಸಿದ್ದಾರೆ. ನಂತರ ಸ್ಥಾನಗಳಲ್ಲಿ ಕ್ರಮವಾಗಿ ಸಚಿನ್ ತೆಂಡೂಲ್ಕರ್ (25396 ರನ್) ಮತ್ತು ರಾಹುಲ್ ದ್ರಾವಿಡ್ (23784 ರನ್) ಇದ್ದಾರೆ.