ಕರ್ನಾಟಕ

karnataka

ETV Bharat / sports

ಚೆಸ್ ಒಲಿಂಪಿಯಾಡ್: ಭಾರತದ 'ರಾಜ', 'ರಾಣಿ'ಯರಿಗೆ ಐತಿಹಾಸಿಕ ಚಿನ್ನ - Chess Olympiad 2024 - CHESS OLYMPIAD 2024

ಚೆಸ್ ಜಗತ್ತಿನಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಇದೇ ಮೊದಲ ಬಾರಿಗೆ ಒಲಿಂಪಿಯಾಡ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ.

ಚೆಸ್​ ಒಲಿಂಪಿಯಾಡ್​ನಲ್ಲಿ ಚಿನ್ನದ ಪದಕ ಗೆದ್ದ ಭಾರತ
ಚೆಸ್​ ಒಲಿಂಪಿಯಾಡ್​ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಪುರುಷ ಮತ್ತು ಮಹಿಳಾ ತಂಡಗಳು (x@FIDE_chess)

By PTI

Published : Sep 23, 2024, 8:41 AM IST

Updated : Sep 23, 2024, 9:46 AM IST

ಬುಡಾಪೆಸ್ಟ್(ಹಂಗೆರಿ):ಯುವ ಚೆಸ್​ ತಾರೆಯರನ್ನೊಳಗೊಂಡ ಭಾರತದ ಪುರುಷ ಮತ್ತು ಮಹಿಳೆಯರ ತಂಡಗಳು 45ನೇ ಆವೃತ್ತಿಯ ಚೆಸ್​ ಒಲಿಂಪಿಯಾಡ್​ನಲ್ಲಿ ಭಾನುವಾರ ಚೊಚ್ಚಲ ಸ್ವರ್ಣ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿವೆ.

ಪುರುಷರ ತಂಡ ಕೊನೆಯ ಸುತ್ತಿನ ಪಂದ್ಯದಲ್ಲಿ ಸ್ಲೊವೇನಿಯಾವನ್ನು 3.5-0.5ರಿಂದ ಮಣಿಸಿತು. ಮಹಿಳಾ ತಂಡ ನಿರ್ಣಾಯಕ ಸುತ್ತಿನಲ್ಲಿ ಅಜರ್​ಬೈಜಾನ್​ ವಿರುದ್ಧ 3.5-0.5 ಅಂತರದಿಂದ ಜಯ ಸಾಧಿಸಿ ಸ್ವರ್ಣ ಪದಕ ಗೆದ್ದುಕೊಂಡಿತು.

18 ವರ್ಷದ ವಿಶ್ವ ಚಾಂಪಿಯನ್ಶಿಪ್ ಚಾಲೆಂಜರ್ ಡಿ.ಗುಕೇಶ್ ಮತ್ತು 21 ವರ್ಷದ ಅರ್ಜುನ್ ಎರಿಗೈಸ್ ಪ್ರಮುಖ ಗೇಮ್‌ಗಳಲ್ಲಿ ಮತ್ತೊಮ್ಮೆ ಅತ್ಯುತ್ತಮ ಪ್ರದರ್ಶನ ತೋರಿದರೆ, 19 ವರ್ಷದ ಆರ್.ಪ್ರಜ್ಞಾನಂದ ಅಂತಿಮ ಸುತ್ತಿನಲ್ಲಿ ಫಾರ್ಮ್​ಗೆ ಮರಳಿ ಭಾರತದ ಗೆಲುವಿನ ಹಾದಿ ಸುಗಮಗೊಳಿಸಿದರು. ನಾಲ್ಕನೇ ಬೋರ್ಡ್‌ನಲ್ಲಿ 29 ವರ್ಷದ ವಿದಿತ್ ಗುಜ್ರಾತಿ ಪಾಯಿಂಟ್​ ಸಾಧಿಸಿ ತಂಡಕ್ಕೆ ಮತ್ತೊಂದು ಭರ್ಜರಿ ಜಯ ತಂದುಕೊಟ್ಟರು.

ಸ್ಲೊವೇನಿಯಾದ ವ್ಲಾಡಿಮಿರ್ ಫೆಡೋಸೀವ್ ವಿರುದ್ಧ 18 ವರ್ಷದ ಗ್ರ್ಯಾಂಡ್‌ಮಾಸ್ಟರ್ ಗುಕೇಶ್ ಅದ್ಭುತ ತಂತ್ರಗಾರಿಕೆಯಿಂದ ಗೆದ್ದು ಬೀಗಿದರು. ಅಚ್ಚರಿಯ ಸೆಂಟರ್ ಕೌಂಟರ್ ಡಿಫೆನ್ಸ್ ಆಟದಿಂದ ಜನ್ ಸುಬೆಲಿ ವಿರುದ್ಧ ಅರ್ಜುನ್ ಎರಿಗೈಸಿ ಮೂರನೇ ಬೋರ್ಡ್‌ನಲ್ಲಿ ಗೆದ್ದರು. ಆಂಟನ್ ಡೆಮ್ಚೆಂಕೊ ವಿರುದ್ಧ ಆರ್​. ಪ್ರಜ್ಞಾನಂದ ಭರ್ಜರಿ ಗೆಲುವು ಕಂಡರು.

ಸ್ಮರಣೀಯ ವಿಜಯದ ನಂತರ ಮಾತನಾಡಿದ ಗುಕೇಶ್, "ವಿಶೇಷವಾಗಿ ನನ್ನ ಆಟದ ಬಗ್ಗೆ ಮತ್ತು ನಾವು ಒಂದು ತಂಡವಾಗಿ ಹೇಗೆ ಆಡಿದ್ದೇವೆ ಎಂಬುದರ ಬಗ್ಗೆ ನನಗೆ ಹೆಮ್ಮೆ ಇದೆ" ಎಂದು ಹರ್ಷ ವ್ಯಕ್ತಪಡಿಸಿದರು.

ಮಹಿಳಾ ತಂಡದ ಪರ 33ರ ಹರೆಯದ ಡಿ.ಹರಿಕಾ ಉತ್ತಮ ಪ್ರದರ್ಶನ ತೋರಿದರೆ, 18ರ ಹರೆಯದ ದಿವ್ಯಾ ದೇಶ್ ಮುಖ್ ತಮ್ಮ ಎದುರಾಳಿ ಗಿವರ್ ಬೆಯ್ದುಲ್ಲಯೇವಾ ಅವರನ್ನು ಹಿಂದಿಕ್ಕಿ ಮೂರನೇ ಸುತ್ತಿನಲ್ಲಿ ವೈಯಕ್ತಿಕ ಚಿನ್ನದ ಪದಕ ಗಳಿಸಿದರು. 23ರ ಹರೆಯದ ಆರ್.ವೈಶಾಲಿ ಡ್ರಾ ಸಾಧಿಸಿದ ನಂತರ, 21 ವರ್ಷದ ವಂತಿಕಾ ಅಗರ್ವಾಲ್ ಕೊನೆಯ ಪಂದ್ಯದಲ್ಲಿ ಬಾಲಾಜಯೇವಾ ಖಾನಿಮ್ ವಿರುದ್ಧ ಗೆಲುವು ದಾಖಲಿಸಿದರು.

ನಾಲ್ಕು ವೈಯಕ್ತಿಕ ಚಿನ್ನ:ಎರಡು ಚಿನ್ನದ ಪದಕಗಳ ಹೊರತಾಗಿ ಭಾರತೀಯ ಆಟಗಾರರು ತಮ್ಮ ಬೋರ್ಡ್​ಗಳಲ್ಲಿ ಅತ್ಯುತ್ತಮ ವೈಯಕ್ತಿಕ ಪ್ರದರ್ಶನದಿಂದ ಹೆಚ್ಚು ಸ್ವರ್ಣ ಪದಕಗಳನ್ನು ಗೆದ್ದರು. ಮುಕ್ತ ವಿಭಾಗದಲ್ಲಿ(Open Section) ಗುಕೇಶ್ ಮತ್ತು ಎರಿಗೈಸ್ ಮೊದಲ ಮತ್ತು ಮೂರನೇ ಬೋರ್ಡ್​ನಲ್ಲಿ ಚಿನ್ನದ ಪದಕಗಳನ್ನು ಗೆದ್ದರೆ, ಮಹಿಳಾ ವಿಭಾಗದಲ್ಲಿ ದಿವ್ಯಾ ದೇಶ್​ಮುಖ್​ ಮತ್ತು ವಂತಿಕಾ ಅಗರ್ವಾಲ್ ಕ್ರಮವಾಗಿ ಮೂರು ಮತ್ತು ನಾಲ್ಕನೇ ಬೋರ್ಡ್​ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನಕ್ಕಾಗಿ ಚಿನ್ನ ಪದಕಕ್ಕೆ ಕೊರಳೊಡ್ಡಿದರು.

ಕಳೆದ ಒಲಿಂಪಿಯಾಡ್ ವಿಜೇತ ಉಜ್ಬೇಕಿಸ್ತಾನ್ ವಿರುದ್ಧ 2-2 ಗೋಲುಗಳ ಅಂತರದಲ್ಲಿ ಡ್ರಾ ಸಾಧಿಸಿದ ಭಾರತದ ಪುರುಷರು ಒಟ್ಟು 22 ಪಂದ್ಯಗಳಲ್ಲಿ 21 ಅಂಕಗಳನ್ನು ಗಳಿಸಿದ್ದಾರೆ. ಒಟ್ಟು 44 ಪಂದ್ಯಗಳ ಪೈಕಿ ಭಾರತ ತಂಡವು ಕೇವಲ ಒಂದು ಪಂದ್ಯದಲ್ಲಿ ಮಾತ್ರ ಸೋಲನುಭವಿಸಿತು.

ಐದು ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿಗಳನ್ನು ಗೆದ್ದಿರುವ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಈ ವೇಳೆ ಉಪಸ್ಥಿತರಿದ್ದರು.

ಬೆಳ್ಳಿ, ಕಂಚು ಗೆದ್ದ ದೇಶಗಳು: ಮುಕ್ತ ವಿಭಾಗದಲ್ಲಿ ಅಮೆರಿಕ ಬೆಳ್ಳಿ, ಉಜ್ಬೇಕಿಸ್ತಾನ ಕಂಚಿನ ಪದಕ ಗೆದ್ದುಕೊಂಡರೆ, ಮಹಿಳೆಯರ ವಿಭಾಗದಲ್ಲಿ ಕಜಕಿಸ್ತಾನ ಬೆಳ್ಳಿ, ಅಮೆರಿಕ ಕಂಚಿನ ಪದಕ ಪಡೆಯಿತು.

ಇದನ್ನೂ ಓದಿ:ವಿಶ್ವ ಟೆಸ್ಟ್​ ಚಾಂಪಿಯನ್ಸ್​ ಅಂಕಪಟ್ಟಿಯಲ್ಲಿ ಟಾಪರ್​ ಆಗಿ ಮುಂದುವರೆದ ಟೀಂ ಇಂಡಿಯಾ - World Test Champions Point table

Last Updated : Sep 23, 2024, 9:46 AM IST

ABOUT THE AUTHOR

...view details