ನವದೆಹಲಿ: ಪ್ಯಾರಿಸ್ ಒಲಿಂಪಿಕ್ನಲ್ಲಿನ ಕಹಿ ಘಟನೆ ಬಳಿಕ ಭಾರತಕ್ಕೆ ಇಂದು ವಾಪಸ್ ಆಗಿರುವ ಕುಸ್ತಿಪಟು ವಿನೇಶ್ ಪೋಗಟ್ ಅವರಿಗೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಗಿದೆ. ಈ ವೇಳೆ ನೂರಾರು ಬೆಂಬಲಿಗರು ಉಪಸ್ಥಿತರಿದ್ದರು.
ಒಲಿಂಪಿಕ್ ಕ್ರೀಡಾಗ್ರಾಮ ತೊರೆದಿದ್ದರೂ ತಮ್ಮ ಅನರ್ಹತೆ ಕುರಿತ ಕೋರ್ಟ್ ಆದೇಶಕ್ಕಾಗಿ ಕಾಯುತ್ತಿದ್ದ ವಿನೇಶ್ ಅವರು, ಪ್ಯಾರಿಸ್ನಲ್ಲಿಯೇ ಇದ್ದರು. ಶನಿವಾರ ಅವರು ತವರಿಗೆ ಮರಳಿದ್ದಾರೆ. ಬಜರಂಗ್ ಪುನಿಯಾ, ಸಾಕ್ಷಿ ಮಲ್ಲಿಕ್ ಸೇರಿದಂತೆ ನೂರಾರು ಬೆಂಬಲಿಗರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಭಾರೀ ಹಾರ, ತುರಾಯಿಗಳೊಂದಿಗೆ ಅವರನ್ನು ಸ್ವಾಗತಿಸಿದ ಬಳಿಕ ಓಪನ್ ಜೀಪ್ನಲ್ಲಿ ಸ್ವಗ್ರಾಮಕ್ಕೆ ಕರೆದುಕೊಂದು ಬರಲಾಗುತ್ತಿದೆ. ಈ ವೇಳೆ ತಮ್ಮ ಪರ ದೇಶಾದ್ಯಂತ ವ್ಯಕ್ತವಾದ ಬೆಂಬಲ ಕುರಿತು ವಿನೇಶ್ ಧನ್ಯವಾದ ಅರ್ಪಿಸಿದರು. ದೆಹಲಿ ವಿಮಾನ ನಿಲ್ದಾಣದಿಂದ ಹರಿಯಾಣದ ತಮ್ಮ ಗ್ರಾಮ ಬಲಾಲಿಗೆ ತೆರಳಲಿದ್ದಾರೆ.
ಮಹಿಳೆಯರ 50 ಕೆ.ಜಿ ವಿಭಾಗದ ಕುಸ್ತಿ ಫೈನಲ್ ಪಂದ್ಯಕ್ಕೂ ಮುನ್ನ 100 ಗ್ರಾಂ ತೂಕ ಹೆಚ್ಚಳವಾದ ಹಿನ್ನೆಲೆಯಲ್ಲಿ ಅವರು ಒಲಿಂಪಿಕ್ನಿಂದ ಅನರ್ಹಗೊಂಡಿದ್ದರು. ಈ ಅನರ್ಹತೆ ಪ್ರಶ್ನಿಸಿ, ಜಂಟಿ ಬೆಳ್ಳಿ ಪದಕ ನೀಡುವಂತೆ ಕೋರಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ನ್ಯಾಯಾಲಯವು ಬುಧವಾರ ಅವರ ಅರ್ಜಿ ವಜಾಗೊಳಿಸಿತ್ತು. ಅನರ್ಹತೆ ಬೆನ್ನಲ್ಲೇ ಅವರು ಕುಸ್ತಿಗೆ ನಿವೃತ್ತಿ ಘೋಷಿಸಿದ್ದಾರೆ.