ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ಪುರುಷರ ಹಾಕಿ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿರುವ ಭಾರತ ತಂಡ ಕಂಚಿನ ಪದಕದೊಂದಿಗೆ ತವರಿಗೆ ಮರಳಿದೆ. 52 ವರ್ಷಗಳ ಬಳಿಕ ಭಾರತ ಹಾಕಿ ತಂಡ ಸತತ ಎರಡು ಒಲಿಂಪಿಕ್ಸ್ಗಳಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಹಿಂದೆ 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದುಕೊಂಡಿತ್ತು.
ಇಂದು ಭಾರತ ಹಾಕಿ ತಂಡ ಪ್ಯಾರಿಸ್ನಿಂದ ತವರಿಗೆ ವಾಪಸಾದ ಬಳಿಕ ವಿಮಾನ ನಿಲ್ದಾಣದಲ್ಲಿ ಇಡೀ ತಂಡಕ್ಕೆ ಭವ್ಯ ಸ್ವಾಗತ ಕೋರಲಾಯಿತು. ಹಾಕಿ ತಂಡದ ಆಟಗಾರರು ವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ನೆರದಿದ್ದ ಅಭಿಮಾನಿಗಳು ಡ್ರಮ್ಗಳನ್ನು ಬಾರಿಸಿ ಹಾರ ಹಾಕಿ ಸ್ವಾಗತ ಕೋರಿದರು. ಇದೇ ವೇಳೆ, ಭಾರತ ಹಾಕಿ ತಂಡದ ಆಟಗಾರರೂ ಸಹ ಡ್ರಮ್ ಬಾರಿಸಿ ಕುಣಿದು ಕುಪ್ಪಳಿಸುವ ದೃಶ್ಯವೂ ಕಂಡು ಬಂತು.
ಭಾರತಕ್ಕೆ ಬಂದಿಳಿದ ನಂತರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್, "ಯಾವುದೇ ಪದಕಗಳಾಗಿರಲಿ ಒಲಿಂಪಿಕ್ಸ್‌ನಲ್ಲಿ ಗೆಲ್ಲುವುದು ಸುಲಭದ ವಿಷಯವಲ್ಲ. ನಾವು ಫೈನಲ್ ತಲುಪಲು ಮತ್ತು ಚಿನ್ನ ಗೆಲ್ಲಲು ಪ್ರಯತ್ನಿಸಿದ್ದೇವೆ. ಆದರೆ, ದುರದೃಷ್ಟವಶಾತ್ ನಮ್ಮ ಆಸೆ ಈಡೆರಲಿಲ್ಲ. ಆದರೂ ನಾವು ಬರಿಗೈಯಲ್ಲಿ ದೇಶಕ್ಕೆ ಹಿಂದಿರುಗಿಲ್ಲ, ಸತತವಾಗಿ ಪದಕಗಳನ್ನು ಗೆದ್ದಿರುವುದು ಸ್ವತಃ ದಾಖಲೆಯಾಗಿದೆ. ಪಿಆರ್ ಶ್ರೀಜೇಶ್ ಅವರಿಗೆ ಕೊನೆಯ ಒಲಿಂಪಿಕ್ಸ್ ಆಗಿದ್ದು ಇದು ಭಾವನಾತ್ಮಕ ಕ್ಷಣವಾಗಿದೆ. ಅವರು ಹಾಕಿಯಿಂದ ನಿವೃತ್ತರಾಗಿದ್ದಾರೆ, ಸದಾ ನಮ್ಮೊಂದಿಗೆ ಸಂಪರ್ಕದಲ್ಲಿರುತ್ತಾರೆ. ನಮಗೆ ಸಿಗುತ್ತಿರುವ ಪ್ರೀತಿ ನಮ್ಮ ಜವಾಬ್ದಾರಿಯನ್ನು ದ್ವಿಗುಣಗೊಳಿಸುತ್ತದೆ. ಜತಗೆ ಭಾರತ ಸರ್ಕಾರ ಮತ್ತು ಕ್ರೀಡಾ ಸಚಿವಾಲಯ ಹಾಗೂ ಒಡಿಶಾ ಸರ್ಕಾರಕ್ಕೂ ಧನ್ಯವಾದಗಳು ತಿಳಿಸುತ್ತೇನೆ ಎಂದು ಹೇಳಿದರು.