ಕರಾಚಿ (ಪಾಕಿಸ್ತಾನ):ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕಿತ್ತಾಟ ಶುರುವಾಗಿದೆ. ಪಾಕ್ ಆತಿಥ್ಯದಲ್ಲಿ ನಡೆಯುವ ಟೂರ್ನಿಗೆ ಭಾರತ ತಂಡ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕಿದೆ. ಪಾಕಿಸ್ತಾನಕ್ಕೆ ತೆರಳಲು ಸರ್ಕಾರದ ಅನುಮತಿ ಇಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ. ಇಂತಹ ನಿರ್ಬಂಧವನ್ನು ಲಿಖಿತ ರೂಪದಲ್ಲಿ ಕೊಡಿ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಕೇಳಿದೆ.
2008 ರ ಏಷ್ಯಾಕಪ್ ಬಳಿಕ ಭಾರತ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿಲ್ಲ. 2013 ರಲ್ಲಿ ಕೊನೆಯದಾಗಿ ಇತ್ತಂಡಗಳು ದ್ವಿಪಕ್ಷೀಯ ಸರಣಿಯನ್ನು ಆಡಿವೆ. ಅದಾದ ಬಳಿಕ ಈವರೆಗೂ ಐಸಿಸಿ ಆಯೋಜಿಸುವ ಟೂರ್ನಿಗಳಲ್ಲಿ ಮಾತ್ರ ಎದುರಾಗಿವೆ. ಭದ್ರತಾ ಸಮಸ್ಯೆ ಮತ್ತು ಎರಡು ರಾಷ್ಟ್ರಗಳ ನಡುವಿನ ಬಿಕ್ಕಟ್ಟಿನಿಂದಾಗಿ ದ್ವಿಪಕ್ಷೀಯ ಸರಣಿಗಳ ಆಯೋಜನೆ ಬಂದ್ ಆಗಿದೆ.
2013 ರಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆದ ಏಷ್ಯಾಕಪ್ ಟೂರ್ನಿ ಕೂಡ ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಯಿತು. ಭಾರತದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದವು. ಈ ಸಲದ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದೆ. ಆದರೆ, ಭದ್ರತಾ ಕಾರಣಗಳಿಂದಾಗಿ ಭಾರತ ತಂಡವನ್ನು ಅಲ್ಲಿಗೆ ಕಳುಹಿಸಲು ಬಿಸಿಸಿಐ ನಿರಾಕರಿಸುತ್ತಿದೆ.
ಬರಲ್ಲ ಎಂದು ಬರೆದುಕೊಡಿ:ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸರ್ಕಾರದ ಆಕ್ಷೇಪವಿದೆ. ಪಾಕ್ ಪ್ರವಾಸವನ್ನು ಸರ್ಕಾರ ನಿರ್ಬಂಧಿಸಿದ್ದರೆ, ಅದನ್ನು ಲಿಖಿತವಾಗಿ ಬರೆದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಗೆ ಸಲ್ಲಿಸಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒತ್ತಾಯಿಸಿದೆ.