ಮುಂಬೈ: ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್ಗೆ ಆತಿಥ್ಯ ವಹಿಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನೀಡಿರುವ ಪ್ರಸ್ತಾವನೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿರಸ್ಕರಿಸಿದೆ.
"ಮಹಿಳಾ ಟಿ20 ವಿಶ್ವಕಪ್ ಆಯೋಜಿಸಲು ಐಸಿಸಿ ನಮಗೆ ಪ್ರಸ್ತಾಪಿಸಿತ್ತು. ಆದರೆ ಸ್ಪಷ್ಟವಾಗಿ ನಿರಾಕರಿಸಲಾಗಿದೆ. ಸದ್ಯ ಮಳೆಗಾಲ. ಪಂದ್ಯಗಳನ್ನು ನಡೆಸುವುದು ಕಷ್ಟ. ಮುಂದಿನ ವರ್ಷ ಮಹಿಳಾ ಏಕದಿನ ವಿಶ್ವಕಪ್ಗೆ ಭಾರತ ಆತಿಥ್ಯವಹಿಸಲಿದೆ. ಹಾಗಾಗಿ ನಾವು ಸತತ ಎರಡು ವಿಶ್ವಕಪ್‌ಗಳನ್ನು ಆಯೋಜಿಸಲು ಆಗುವುದಿಲ್ಲ" ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
ಈ ಬಾರಿಯ ಮಹಿಳಾ ಟಿ20 ವಿಶ್ವಕಪ್ಗೆ ಬಾಂಗ್ಲಾದೇಶ ಆತಿಥ್ಯ ವಹಿಸಿಕೊಂಡಿತ್ತು. ವೇಳಾಪಟ್ಟಿಯಂತೆ ಅಕ್ಟೋಬರ್ 3ರಿಂದ 20ರ ವರೆಗೆ ಪಂದ್ಯಾವಳಿ ಆಯೋಜಿಸಲಾಗಿತ್ತು. ಆದರೆ ಬಾಂಗ್ಲಾದಲ್ಲಿ ಉದ್ಯೋಗ ಮೀಸಲಾತಿ ವಿಚಾರವಾಗಿ ಭಾರಿ ಗಲಭೆ ನಡೆಯುತ್ತಿದ್ದು ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಹಿಂಸಾಚಾರದಿಂದಾಗಿ ಪ್ರಧಾನಿ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ತ್ಯಜಿಸಿದ್ದಾರೆ. ಸದ್ಯ ಮೊಹಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಿದ್ದು ಪರಿಸ್ಥಿತಿ ಸ್ವಲ್ಪಮಟ್ಟಿಗೆ ಹತೋಟಿಗೆ ಬಂದಿದೆ. ಹೀಗಿದ್ದರೂ ಯಾವುದೇ ಸಮಯದಲ್ಲಿ ಮತ್ತೆ ಗಲಭೆ ಉಂಟಾಗುವ ಸಾಧ್ಯತೆ ಇರುವುದರಿಂದ ಐಸಿಸಿ ಪ್ರಸ್ತುತ ಕಾದುನೋಡುವ ನೀತಿ ಅಳವಡಿಸಿಕೊಂಡಿದೆ.
ಐಸಿಸಿ ಮಂಡಳಿಯ ಸದಸ್ಯರೊಬ್ಬರು ಪ್ರತಿಕ್ರಿಯಿಸಿ, "ಬಾಂಗ್ಲಾದಲ್ಲಾಗುತ್ತಿರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಪಂದ್ಯಾವಳಿ ಪ್ರಾರಂಭವಾಗಲು ಇನ್ನೂ ಏಳು ವಾರಗಳಿವೆ. ಸದ್ಯ ಅಲ್ಲಿನ ಗಲಾಟೆಯಿಂದಾಗಿ ಪಂದ್ಯಾವಳಿಯನ್ನು ಬಾಂಗ್ಲಾದೇಶದಿಂದ ಸ್ಥಳಾಂತರಿಸಲಾಗುತ್ತದೆಯೇ, ಇಲ್ಲವೇ ಎಂಬುದರ ಬಗ್ಗೆ ಚರ್ಚಿಸಲಾಗುತ್ತಿದೆ. ಆಗಸ್ಟ್ 20ಕ್ಕೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.
ಒಂದು ವೇಳೆ ಪಂದ್ಯಾವಳಿಗಳನ್ನು ಸ್ಥಳಾಂತರಿಸಬೇಕಾದ ಅನಿವಾರ್ಯತೆ ಎದುರಾದಲ್ಲಿ ಐಸಿಸಿಯ ಮುಂದಿನ ಆಯ್ಕೆ ಶ್ರೀಲಂಕಾ ಅಥವಾ ಯುಎಇ ಆಗಿರಲಿದೆ. ಶ್ರೀಲಂಕಾ 2012ರಲ್ಲಿ ಪುರುಷರ ಟಿ20 ವಿಶ್ವಕಪ್ಗೆ ಆತಿಥ್ಯ ವಹಿಸಿತ್ತು. ಅದಾದ ಬಳಿಕ ಯಾವುದೇ ಐಸಿಸಿ ಪ್ರಮುಖ ಟ್ರೋಫಿ ಪಂದ್ಯಗಳು ಇಲ್ಲಿ ನಡೆದಿಲ್ಲ.
ಮತ್ತೊಂದೆಡೆ, ಬಾಂಗ್ಲಾಗೆ ಪ್ರಯಾಣ ಬೆಳೆಸಲಿರುವ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಭಾರತದಂತಹ ದೊಡ್ಡ ರಾಷ್ಟ್ರದ ಆಟಗಾರರ ಭದ್ರತಾ ವಿಚಾರವಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯಿಂದ ಕೆಲ ಮಾಹಿತಿಗಳನ್ನು ಕೇಳಲಾಗಿದೆ. ಸದ್ಯ ಬಾಂಗ್ಲಾದಲ್ಲಿ ಹೊಸ ಮಧ್ಯಂತರ ಸರ್ಕಾರವು ಜಾರಿಯಾಗಿದ್ದು ಪಂದ್ಯಾವಳಿಯನ್ನು ಆಯೋಜಿಸುವ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:ಮಧ್ಯರಾತ್ರಿ ನನ್ನ ಕೋಣೆಯಲ್ಲಿ ಅದೇನೋ ವಿಚಿತ್ರವಾಗಿ ಚಲಿಸುತ್ತಿದುದನ್ನು ಕಣ್ಣಾರೆ ಕಂಡೆ: ದಿನೇಶ್ ಕಾರ್ತಿಕ್ - Paranormal Activity