ಹೈದರಾಬಾದ್:ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ 17 ವರ್ಷದ ಯುವ ಬ್ಯಾಟರ್ ವಿಶ್ವದಾಖಲೆ ಬರೆದರು.
ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ಇಂದು ನಾಗಾಲ್ಯಾಂಡ್ ಮತ್ತು ಮುಂಬೈ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ, ಆಯುಷ್ ಮ್ಹಾತ್ರೆ, ಅಂಗ್ಕ್ರಿಷ್ ರಘುವಂಶಿ, ಶಾರ್ದುಲ್ ಠಾಕೂರ್ ಬ್ಯಾಟಿಂಗ್ ಬಲದಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 403 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ನಾಗಾಲ್ಯಾಂಡ್ 214 ರನ್ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ 189 ರನ್ಗಳಿಂದ ಸೋಲನುಭವಿಸಿತು.
ಈ ಪಂದ್ಯದಲ್ಲಿ ಐಪಿಎಲ್ನಲ್ಲಿ ಅನ್ಸೋಲ್ಡ್ ಆಗಿದ್ದ ಯುವ ಬ್ಯಾಟರ್ ವಿಶ್ವದಾಖಲೆ ಬರೆದಿದ್ದಾರೆ. ಮುಂಬೈ ತಂಡವನ್ನು ಪ್ರತಿನಿಧಿಸಿದ್ದ ಆಯುಷ್ ಮ್ಹಾತ್ರೆ ಬೆಸ್ಟ್ ಇನ್ನಿಂಗ್ಸ್ ಆಡಿ ಜೈಸ್ವಾಲ್ ಹೆಸರಲ್ಲಿದ್ದ ದೊಡ್ಡ ದಾಖಲೆ ಮುರಿದರು. ಇದರೊಂದಿಗೆ, ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವೇಗವಾಗಿ 150ಕ್ಕಿಂತ ಹೆಚ್ಚು ರನ್ ಗಳಿಸಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಬರೆದರು.
ಮುಂಬೈ ಪರ ಅಂಗ್ಕ್ರಿಶ್ ರಘುವಂಶಿ ಅವರೊಂದಿಗೆ ಇನ್ನಿಂಗ್ಸ್ ತೆರೆಯಲು ಬಂದ ಆಯುಷ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. 117 ಎಸೆತಗಳಲ್ಲಿ 181 ರನ್ ಪೇರಿಸುವ ಮೂಲಕ ಜೈಸ್ವಾಲ್ ಅವರ ದಾಖಲೆ ಅಳಿಸಿ ಹಾಕಿದರು.
2019ರಲ್ಲಿ ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ 17 ವರ್ಷದ 291 ದಿನಗಳ ವಯಸ್ಸಿನ ಜೈಸ್ವಾಲ್ 150ಕ್ಕೂ ಹೆಚ್ಚು ರನ್ ಗಳಿಸಿ ಈ ಸಾಧನೆ ಮಾಡಿದ್ದರು. ಇದೀಗ ಅವರ ದಾಖಲೆಯನ್ನು ಮುರಿದು ಹಾಕಿದ್ದಾರೆ.
ಆಯುಷ್ ಕೇವಲ 17 ವರ್ಷ ಮತ್ತು 168 ದಿನಗಳ ವಯಸ್ಸಿನಲ್ಲಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 150ಕ್ಕಿಂತ ಹೆಚ್ಚು ರನ್ ಗಳಿಸಿದ ವಿಶ್ವದ ಅತ್ಯಂತ ಕಿರಿಯ ಆಟಗಾರನಾಗಿದ್ದಾರೆ. ಆಯುಷ್ ಮತ್ತು ಯಶಸ್ವಿ ಹೊರತುಪಡಿಸಿ ರಾಬಿನ್ ಉತ್ತಪ್ಪ 19 ವರ್ಷ ಮತ್ತು 63 ದಿನಗಳ ವಯಸ್ಸಿನಲ್ಲಿ ಕರ್ನಾಟಕದ ಪರ 150ಕ್ಕೂ ಹೆಚ್ಚು ರನ್ ಗಳಿಸಿದ್ದರು.