ಮೆಲ್ಬೋರ್ನ್( ಆಸ್ಟ್ರೇಲಿಯಾ):25ನೇ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿ ಗೆಲ್ಲುವ ವಿಶ್ವದ ನಂ 1 ಟಿನ್ನಿಸ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರ ಕನಸು ಭಗ್ನವಾಗಿದೆ. ಇಂದು ರಾಡ್ ಲೇವರ್ ಅರೇನಾದಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಜೊಕೊವಿಕ್ ಅವರನ್ನು ನಾಲ್ಕನೇ ಶ್ರೇಯಾಂಕದ ಇಟಲಿಯ ಜನ್ನಿಕ್ ಸಿನ್ನರ್ ಅವರು 6-1, 6-2, 6-7, 6-3 ಅಂತರರಿಂದ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟರು.
ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಜೊಕೊವಿಕ್ ಗೆಲ್ಲುವ ಭರವಸೆಯನ್ನು ಹೊಂದಿದ್ದರು. ಆದರೆ ಇಟಲಿಯ ಜನ್ನಿಕ್ ಸಿನ್ನರ್, ಜೊಕೊವಿಕ್ ಅವರನ್ನು ಮೊದಲೆರಡು ಸೆಟ್ಗಳಲ್ಲೇ ಮಣಿಸಿದರು. ನಂತರ ಮೂರನೇ ಸೆಟ್ಅನ್ನು ಬಿಟ್ಟುಕೊಟ್ಟು, ನಿರ್ಣಾಯಕ ಮತ್ತು ಅಂತಿಮ ಸೆಟ್ನಲ್ಲಿ ಗೆದ್ದು ಬೀಗಿದರು. ಈ ಮೂಲಕ ಸ್ಟಾನ್ ವಾವ್ರಿಂಕಾ, ಡೆನಿಸ್ ಇಸ್ಟೋಮಿನ್ ಮತ್ತು ಹೈಯಾನ್ ಚುಂಗ್ ನಂತರ ಮೆಲ್ಬೋರ್ನ್ನಲ್ಲಿ ಜೊಕೊವಿಕ್ ಅವರನ್ನು ಸೋಲಿಸಿದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಜನ್ನಿಕ್ ಸಿನ್ನರ್ ಪಾತ್ರರಾಗಿದ್ದಾರೆ.
ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಜನ್ನಿಕ್ ಸಿನ್ನರ್ ಮೂರನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್ ಅಥವಾ ಆರನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವೆರೆವ್ ಅವರ ಎದುರು ಸೆಣಸಲಿದ್ದಾರೆ.