Steve Smit: ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಮೆಲ್ಬೋರ್ನ್ ಮೈದಾನದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಆಸೀಸ್ ಮೊದಲ ಇನ್ನಿಂಗ್ಸ್ನಲ್ಲಿ ಬೃಹತ್ ಮೊತ್ತವನ್ನು ಕಲೆಹಾಕಿದೆ. ಆಸೀಸ್ ಪರ ಸ್ಯಾಮ್ ಕಾನ್ಸ್ಟಾಸ್ (60), ಉಸ್ಮಾನ್ ಖವಾಜ (57), ಲಬುಶೇನ್ (72) ಅರ್ಧ ಶತಕ ಸಿಡಿದರೇ, ಸ್ಟೀವ್ ಸ್ಮಿತ್ ಶತಕ ಸಿಡಿಸಿ ಅಬ್ಬರಿಸಿದು. ಇದರಿಂದಾಗಿ ಕಾಂಗರೂ ಪಡೆ ಮೊದಲ ಇನ್ನಿಂಗ್ಸ್ನಲ್ಲಿ 474 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿತು.
ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಫಾರ್ಮ್ಗೆ ಮರಳಿದ್ದ ಸ್ಟೀವ್ ಸ್ಮಿತ್ ಈ ಪಂದ್ಯದಲ್ಲೂ ಶತಕ ಸಿಡಿಸುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ. ಅವರು ತಮ್ಮ ಇನ್ನಿಂಗ್ಸ್ನಲ್ಲಿ 197 ಎಸೆತಗಳನ್ನು ಎದುರಿಸಿ 13 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 140 ರನ್ ಚಚ್ಚಿದ್ದಾರೆ. ಇದರೊಂದಿಗೆ ಇಂಗ್ಲೆಂಡ್ನ ಸ್ಟಾರ್ ಬ್ಯಾಟರ್ ಜೋ ರೂಟ್ ಅವರನ್ನು ಹಿಂದಿಕ್ಕಿ ಭಾರತದ ವಿರುದ್ಧ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್ ಆಗಿ ದಾಖಲೆ ಬರೆದಿದ್ದಾರೆ.
ಸ್ಮಿತ್ ಭಾರತದ ವಿರುದ್ಧ 43 ಇನ್ನಿಂಗ್ಸ್ಗಳನ್ನು ಆಡಿ 11 ಶತಕ ಸಿಡಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಜೋ ರೂಟ್ ಭಾರತದ ವಿರುದ್ಧ 55 ಇನ್ನಿಂಗ್ಸ್ಗಳಲ್ಲಿ 10 ಶತಕ ಸಿಡಿಸಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ರಿಕಿ ಪಾಂಟಿಂಗ್ (8), ವಿವಿಯನ್ ರಿಚರ್ಡ್ಸ್ (8), ಗ್ಯಾರಿ ಸೋಬರ್ಸ್ (8) ಕ್ರಮವಾಗಿ ನಂತರದ ಸ್ಥಾನದಲ್ಲಿದ್ದಾರೆ. ತವರಿನಲ್ಲಿ ಆಡಿದ ಭಾರತ ವಿರುದ್ಧ ಕೊನೆಯ 10 ಟೆಸ್ಟ್ ಇನ್ನಿಂಗ್ಸ್ಗಳಲ್ಲಿ ಸ್ಮಿತ್ 7 ಬಾರಿ ಶತಕ ಸಿಡಿಸಿದ್ದಾರೆ. ಒಟ್ಟಾರೆ ಇದು ಬಲಗೈ ಬ್ಯಾಟ್ಸ್‌ಮನ್‌ನ 34ನೇ ಟೆಸ್ಟ್ ಶತಕವಾಗಿದೆ.
ಇದಲ್ಲದೇ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಸ್ಮಿತ್ ಅವರಿಗೆ ಇದು ಐದನೇ ಶತಕವಾಗಿದೆ. ಎಂಸಿಜಿಯಲ್ಲಿ ಭಾರತದ ವಿರುದ್ಧ ಸ್ಮಿತ್ ಅವರ ಅತ್ಯಧಿಕ ಸ್ಕೋರ್ (192) ಕೂಡ ಆಗಿದೆ.
34ನೇ ಟೆಸ್ಟ್ ಶತಕ:4ನೇ ಟೆಸ್ಟ್ನ ಎರಡನೇ ದಿನದಾಟದಂದು ಸ್ಮಿತ್ ತಮ್ಮ ಟೆಸ್ಟ್ ವೃತ್ತಿ ಜೀವನದ 34ನೇ ಶತಕ ಸಿಡಿಸಿದ್ದಾರೆ. ಇದು ಈ ಸರಣಿಯ 2ನೇ ಶತಕವಾಗಿದೆ. ಈ ಶತಕದೊಂದಿಗೆ ಅಲಸ್ಟೈರ್ ಕುಕ್, ಕೇನ್ ವಿಲಿಯಮ್ಸನ್, ಬ್ರಿಯಾನ್ ಲಾರಾ, ಯೂನಿಸ್ ಖಾನ್ ಮತ್ತು ಸುನೀಲ್ ಗವಾಸ್ಕರ್ ಅವರ ದಾಖಲೆಯನ್ನು ಸರಿಗಟ್ಟಿ ಟೆಸ್ಟ್ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಬ್ಯಾಟರ್ ಆಗಿ 7ನೇ ಸ್ಟಾನಕ್ಕೇರಿದ್ದಾರೆ.