Australia Squad ANNOUNCED:ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ನಡೆಯಲಿರುವ ಭಾರತ ವಿರುದ್ಧದ ಅಂತಿಮ ಎರಡು ಟೆಸ್ಟ್ ಪಂದ್ಯಗಳಿಗೆ ಆಸ್ಟ್ರೇಲಿಯಾ 15 ಆಟಗಾರರನ್ನು ಒಳಗೊಂಡ ತಂಡವನ್ನು ಪ್ರಕಟಿಸಲಾಗಿದೆ.
ಮೊದಲ ಮೂರು ಟೆಸ್ಟ್‌ಗಳಲ್ಲಿ ಉಸ್ಮಾನ್ ಖವಾಜಾ ಜೊತೆಗೂಡಿ ಇನ್ನಿಂಗ್ಸ್ ಆರಂಭಿಸಿದ್ದ ನಾಥನ್ ಮೆಕ್‌ಸ್ವೀನಿ ಅವರನ್ನು ತಂಡದಿಂದ ಕೈಬಿಡಲಾಗಿದೆ. ಅವರ ಸ್ಥಾನಕ್ಕೆ 19 ವರ್ಷದ ಯುವ ಬ್ಯಾಟ್ಸ್‌ಮನ್ ಸ್ಯಾಮ್ ಕಾನ್‌ಸ್ಟಾಸ್ ಅವರನ್ನು ಆಯ್ಕೆ ಮಾಡಲಾಗಿದೆ. ಸ್ಯಾಮ್ ಅವರಿಗೆ ಇದು ಚೊಚ್ಚಲ ಅಂತರಾಷ್ಟ್ರೀಯ ಪಂದ್ಯವಾಗಿದೆ.
ಕ್ರಿಕೆಟ್ ವಿಶ್ಲೇಷಕರ ಪ್ರಕಾರ, ಉಳಿದ ಎರಡು ಪಂದ್ಯಗಳಲ್ಲಿ ಉಸ್ಮಾನ್ ಖವಾಜಾ ಅವರೊಂದಿಗೆ ಕಾನ್‌ಸ್ಟಾಸ್ ಪಂದ್ಯವನ್ನು ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದಲ್ಲದೇ ಮೂರು ವರ್ಷಗಳ ಬಳಿಕ ಆಸೀಸ್ ವೇಗಿ ಜೇ ರಿಚರ್ಡ್ಸನ್ ಅವರೂ ತಂಡಕ್ಕೆ ಮರಳಿದ್ದಾರೆ. ಜತೆಗೆ ಮತ್ತೊಬ್ಬ ವೇಗಿ ಸೀನ್ ಅಬಾಟ್ ಕೂಡ ಈ ಬಾರಿ ಅಂತಿಮ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಸ್ಯಾಮ್ ಕಾನ್‌ಸ್ಟಾಸ್ ಯಾರು?
ಹದಿಹರೆಯದ ಸ್ಯಾಮ್ ಕಾನ್‌ಸ್ಟಾಸ್ ಟ್ಯಾಪ್ ಆರ್ಡರ್ ಬ್ಯಾಟರ್ ಆಗಿದ್ದ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯಿಂದಲೇ ಖ್ಯಾತಿ ಪಡೆದಿದ್ದಾರೆ. ಇತ್ತೀಚೆಗೆ ಆರಂಭವಾದ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಥಂಡರ್‌ಗೆ ಪಾದಾರ್ಪಣೆ ಮಾಡಿದ ಈ ಯುವ ಆಟಗಾರ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ 27 ಎಸೆತಗಳಲ್ಲಿ 56 ರನ್ ಸಿಡಿಸಿದ್ದರು. ಇದರಲ್ಲಿ ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸೇರಿವೆ. ಸ್ಯಾಮ್ ತಮ್ಮ ಅದ್ಭುತ ಇನ್ನಿಂಗ್ಸ್‌ನೊಂದಿಗೆ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಶೆಫೀಲ್ಡ್ ಶೀಲ್ಡ್‌ನಲ್ಲಿ ದಕ್ಷಿಣ ಆಸ್ಟ್ರೇಲಿಯಾ ವಿರುದ್ಧ ಬ್ಯಾಕ್-ಟು-ಬ್ಯಾಕ್ ಶತಕಗಳನ್ನು ಗಳಿಸಿದ ಸ್ಯಾಮ್ ಕಾನ್ಸ್ಟಸ್, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಿಎಂ ಇಲೆವೆನ್ ಪಂದ್ಯದಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆರಂಭಿಕರಾಗಿ ಬಂದು ಶತಕ (107) ಬಾರಿಸಿದ್ದರು.
ಏತನ್ಮಧ್ಯೆ, ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಪ್ರಸ್ತುತ ಉಭಯ ತಂಡಗಳು 1-1 ಅಂತರದಿಂದ ಸಮಬಲ ಸಾಧಿಸಿವೆ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ ಗೆದ್ದಿದ್ದರೇ, ಅಡಿಲೇಡ್‌ನ ಎರಡನೇ ಟೆಸ್ಟ್‌ನಲ್ಲಿ ಆಸೀಸ್ ಗೆದ್ದಿತ್ತು. ಆದಾಗ್ಯೂ, ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಪಂದ್ಯ ಟೆಸ್ಟ್ ಡ್ರಾನಲ್ಲಿ ಕೊನೆಗೊಂಡಿತು. ಇದರೊಂದಿಗೆ ಡಿಸೆಂಬರ್ 26-30ರ ನಡುವೆ ಮೆಲ್ಬೋರ್ನ್‌ನಲ್ಲಿ ನಾಲ್ಕನೇ ಟೆಸ್ಟ್ ಹಾಗೂ ಜನವರಿ 3-7ರ ನಡುವೆ ಸಿಡ್ನಿಯಲ್ಲಿ ಐದನೇ ಟೆಸ್ಟ್ ನಡೆಯಲಿದೆ.
ಆಸ್ಟ್ರೇಲಿಯಾ ತಂಡ:ಪ್ಯಾಟ್ ಕಮ್ಮಿನ್ಸ್ (ನಾಯಕ), ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಸ್‌ಚಾಗ್ನೆ, ಸ್ಯಾಮ್ ಕೊನ್‌ಸ್ಟಾಸ್, ಸ್ಟೀವ್ ಸ್ಮಿತ್, ಸೀನ್ ಅಬಾಟ್, ಬ್ಯೂ ವೆಬ್‌ಸ್ಟರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಉಸ್ಮಾನ್ ಖವಾಜಾ, ಜೋಶ್ ಇಂಗ್ಲಿಸ್, ನಾಥನ್ ಲಯನ್. , ಮಿಚೆಲ್ ಮಾರ್ಷ್, ರಿಚರ್ಡ್ಸನ್, ಮಿಚೆಲ್ ಸ್ಟಾರ್ಕ್.
ಇದನ್ನೂ ಓದಿ:ಡಿ.26ರಂದು ಭಾರತ vs ಆಸ್ಟ್ರೇಲಿಯಾ ಬಾಕ್ಸಿಂಗ್ ಡೇ ಟೆಸ್ಟ್: ಹೀಗಂದ್ರೇನು?, ಪ್ರತಿ ವರ್ಷ ಬಾಕ್ಸಿಂಗ್ ಡೇ ಪಂದ್ಯವೇಕೆ?