ಕಿಂಗ್‌ಸ್ಟನ್:ಅಫ್ಘಾನಿಸ್ತಾನದ ಎದುರು ಬಾಂಗ್ಲಾದೇಶ ಸೋಲುತ್ತಿದ್ದಂತೆ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ಟಿ20 ವಿಶ್ವಕಪ್ನಿಂದ ಹೊರಬಿತ್ತು. ಇದರೊಂದಿಗೆ ತಂಡದ ಹಿರಿಯ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರ ವೃತ್ತಿಜೀವನವೂ ಅಂತ್ಯ ಕಂಡಿತು.
ಟಿ20 ವಿಶ್ವಕಪ್ ಬಳಿಕ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳುವುದಾಗಿ ವಾರ್ನರ್ ಘೋಷಿಸಿದ್ದರು. ಆಸೀಸ್ ತಂಡ ವಿಶ್ವಕಪ್ ಅಭಿಯಾನ ಸೋಲಿನ ಮೂಲಕ ಮುಗಿಸಿದ್ದು, ವಾರ್ನರ್ ನಿರಾಸೆಯೊಂದಿಗೆ ಕ್ರಿಕೆಟ್ಗೆ ಗುಡ್ಬೈ ಹೇಳಿದರು. 37 ವರ್ಷ ವಯಸ್ಸಿನ ವಾರ್ನರ್, 2009ರ ಜನವರಿಯಲ್ಲಿ ಟಿ-20 ಮಾದರಿಗೆ ಪಾದಾರ್ಪಣೆ ಮಾಡಿದ್ದರು.
ಜೂನ್ 24ರಂದು ಭಾರತ ವಿರುದ್ಧ ನಡೆದ ಪಂದ್ಯವು ಅವರ ವೃತ್ತಿ ಬದುಕಿನ ಕೊನೆಯದ್ದಾಯಿತು. ಆ ಪಂದ್ಯದಲ್ಲಿ ಆಸ್ಟ್ರೇಲಿಯಾ 24 ರನ್‌ಗಳಿಂದ ಸೋಲು ಕಂಡಿತು. 6 ಎಸೆತಗಳಲ್ಲಿ 6 ರನ್ ಗಳಿಸಿದ್ದಾಗ ಅವರು ಔಟಾದರು. ಇದೇ ತಮ್ಮ ಕೊನೆಯ ಪಂದ್ಯವಾಗಲಿದೆ ಎಂದು ಯಾರೂ ಭಾವಿಸಿರಲಿಲ್ಲ. ಹೀಗಾಗಿ ತಂಡವು ಗಾರ್ಡ್ ಆಫ್ ಹಾನರ್ ನೀಡಿರಲಿಲ್ಲ. ಪ್ರೇಕ್ಷಕರು ಕೂಡ ಚಪ್ಪಾಳೆ ತಟ್ಟಿರಲಿಲ್ಲ.
ವಾರ್ನರ್ ಟಿ20 ದಾಖಲೆಗಳು:ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟರ್ಗಳಲ್ಲಿ ಒಬ್ಬರಾದ ಡೇವಿಡ್ ವಾರ್ನರ್, ತಂಡದ ಪರ ಈವರೆಗೂ 110 ಟಿ20 ಪಂದ್ಯಗಳನ್ನಾಡಿದ್ದಾರೆ. 33.43ರ ಸರಾಸರಿ, 142.47 ಸ್ಟ್ರೈಕ್ ರೇಟ್‌ನಲ್ಲಿ 3,277 ರನ್ ಗಳಿಸಿದ್ದಾರೆ. ಇದರೊಂದಿಗೆ ಆಸ್ಟ್ರೇಲಿಯಾ ಪರ ಅತ್ಯಧಿಕ ರನ್ ಗಳಿಸಿದ ಆಟಗಾರ ಮತ್ತು ಟಿ-20 ಇತಿಹಾಸದಲ್ಲಿ ಏಳನೇ ಬ್ಯಾಟರ್ ಆಗಿದ್ದಾರೆ. ಚುಟುಕು ಮಾದರಿಯಲ್ಲಿ ಅವರು ಒಂದು ಶತಕ ಮತ್ತು 28 ಅರ್ಧಶತಕ ಗಳಿಸಿದ್ದಾರೆ.