Match Fixing Case: ಯುಎಇಯಲ್ಲಿ ನಡೆಯುತ್ತಿರುವ ಅಬುಧಾಬಿ ಟಿ-10 ಲೀಗ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದ್ದು, ಪಂದ್ಯವನ್ನು ಫಿಕ್ಸ್ ಮಾಡಲು ಯತ್ನಿಸಿದ್ದಕ್ಕಾಗಿ ತಂಡದ ಮಾಜಿ ಸಹಾಯಕ ಕೋಚ್‌ಗೆ ಐಸಿಸಿ ಕ್ರಿಕೆಟ್ನಿಂದ ನಿಷೇಧ ಹೇರಿದೆ.
ಅಬುಧಾಬಿ ಟಿ10 ಲೀಗ್‌ನಲ್ಲಿ ಫ್ರಾಂಚೈಸ್ ತಂಡದ ಮಾಜಿ ಸಹಾಯಕ ಕೋಚ್ ಆಗಿದ್ದ ಸನ್ನಿ ಧಿಲ್ಲೋನ್ ಮ್ಯಾಚ್ ಫಿಕ್ಸಿಂಗ್ ಮಾಡಲು ಪ್ರಯತ್ನಿಸಿದ್ದಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಆರು ವರ್ಷಗಳ ಕಾಲ ಕ್ರಿಕೆಟ್‌ನ ಎಲ್ಲ ಸ್ವರೂಪಗಳಿಂದ ಅವರನ್ನು ನಿಷೇಧಿಸಿ ಆದೇಶ ಮಾಡಿದೆ. 2021ರ ಆವೃತ್ತಿಯಲ್ಲಿ ಧಿಲ್ಲೋನ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು.
ಮೂಲಗಳ ಪ್ರಕಾರ, ಫ್ರಾಂಚೈಸ್ ತಂಡದ ಮಾಜಿ ಸಹಾಯಕ ಕೋಚ್ ಆಗಿರುವ ಧಿಲ್ಲೋನ್ ಭ್ರಷ್ಟಾಚಾರ ವಿರೋಧಿ ಸಂಹಿತೆ ಉಲ್ಲಂಘಿಸಿದ ಆರೋಪ ಎದುರಿಸಿದ್ದ ಎಂಟು ಜನರಲ್ಲಿ ಒಬ್ಬರಾಗಿದ್ದರು. 2021ರ ಅಬುಧಾಬಿ T10 ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಂದ್ಯಗಳ ಫಲಿತಾಂಶದ ಮೇಲೆ ಪ್ರಭಾವ ಬೀರಲು ಫಿಕ್ಸಿಂಗ್ಗೆ ಪ್ರಯತ್ನಿಸಿದ್ದರು. ಕಳೆದ ವರ್ಷ ಈ ವಿಷಯ ಬೆಳಕಿಗೆ ಬಂದಿದ್ದರೂ, ಅಂದಿನಿಂದ ತನಿಖೆ ನಡೆಸಲಾಗಿತ್ತು. ಆರೋಪ ಸಾಬೀತಾಗಿದ್ದು ನಿಷೇಧ ವಿಧಿಸಲಾಗಿದೆ.
ಈ ನಿಷೇಧವು ಕಳೆದ ವರ್ಷ ಸೆಪ್ಟೆಂಬರ್ 13ರಿಂದಲೇ ಅನ್ವಯವಾಗಲಿದೆ ಎಂದು ಐಸಿಸಿ ಹೇಳಿದೆ. ತಂಡದ ಬಗ್ಗೆ ವಿವರಗಳನ್ನು ನೀಡುವುದು ಮತ್ತು ಫಲಿತಾಂಶಗಳನ್ನು ಹಾಳುಮಾಡಲು ಪ್ರಯತ್ನಿಸುವುದು ಮುಂತಾದ ಗಂಭೀರ ಅಪರಾಧಗಳಲ್ಲಿ ಧಿಲ್ಲಾನ್ ತಪ್ಪಿತಸ್ಥನೆಂದು ತನಿಖೆಯಲ್ಲಿ ಕಂಡು ಹಿಡಿದಿದೆ. ಭ್ರಷ್ಟಾಚಾರ-ವಿರೋಧಿ ಸಂಹಿತೆಯ ಆರ್ಟಿಕಲ್ 2.4.4 ಮತ್ತು ತನಿಖೆಗೆ ಅಸಹಕಾರದ ಆರ್ಟಿಕಲ್ 2.4.6ರ ನಿಬಂಧನೆಗಳನ್ನು ಉಲ್ಲಂಘಿಸಿದ್ದ ಕಾರಣ ತಪ್ಪಿತಸ್ಥ ಎಂದು ICC ತೀರ್ಮಾನಿಸಿದೆ.
ಇದನ್ನೂ ಓದಿ:ಜಯ್ ಶಾ ICC ಅಧ್ಯಕ್ಷರಾಗ್ತಿದ್ದಂತೆ ಈ ದೇಶದ ಕ್ರಿಕೆಟ್ ಲೀಗ್ ಬ್ಯಾನ್!