ಮೆಲ್ಬರ್ನ್:ರಾಡ್ ಲೇವರ್ ಅರೇನಾದಲ್ಲಿ ಅಧಿಪತ್ಯ ಮುಂದುವರಿಸಿದ ಬೆಲಾರಸ್ನ ಟೆನಿಸ್ ತಾರೆ ಅರಿನಾ ಸಬಲೆಂಕಾ ಆಸ್ಟ್ರೇಲಿಯನ್ ಓಪನ್ನ ಮಹಿಳಾ ಸಿಂಗಲ್ಸ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಚೀನಾ ಆಟಗಾರ್ತಿ ಕ್ವಿನ್ವೆನ್ ಝೆಂಗ್ ಅವರನ್ನು ಸೋಲಿಸುವ ಮೂಲಕ ಸತತ ಎರಡನೇ ಬಾರಿಗೆ ಕಿರೀಟ ಧರಿಸಿದರು.
ಇಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಏಕಾಧಿಪತ್ಯ ಸಾಧಿಸಿದ ವಿಶ್ವದ ನಂಬರ್ 1 ಆಟಗಾರ್ತಿ ಸಬಲೆಂಕಾ, ಕೇವಲ 76 ನಿಮಿಷಗಳಲ್ಲಿ ಚೀನಾದ ಟೆನಿಸ್ಪಟು ಕ್ವಿನ್ವೆನ್ ಝೆಂಗ್ ಅವರನ್ನು 6-3, 6-2 ಸೆಟ್ಗಳಿಂದ ಮಣಿಸಿದರು. ಸತತ ಎರಡನೇ ಬಾರಿಗೆ ಪ್ರಶಸ್ತಿ ಜಯಿಸುವ ಮೂಲಕ 11 ವರ್ಷಗಳ ಹಿಂದೆ ತನ್ನದೇ ದೇಶದ ವಿಕ್ಟೋರಿಯಾ ಅಜರೆಂಕಾ ನಿರ್ಮಿಸಿದ್ದ ದಾಖಲೆಯನ್ನು ಮುರಿದರು.
ಒಂದು ಸೆಟ್ ಸೋಲದೇ ಪ್ರಶಸ್ತಿ ಗೆಲುವು:ವಿಶ್ವದ ಬಲಾಢ್ಯ ಟೆನಿಸ್ ಆಟಗಾರ್ತಿಯಾಗಿರುವ ಸಬಲೆಂಕಾ, ಆಸ್ಟ್ರೇಲಿಯನ್ ಓಪನ್ನಲ್ಲಿ ಒಂದೇ ಒಂದು ಸೆಟ್ ಸೋಲು ಕಂಡಿಲ್ಲ. ಮೊದಲ ಪಂದ್ಯದಿಂದ ಹಿಡಿದು ಫೈನಲ್ವರೆಗೂ ಸೋಲರಿಯದೇ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ವಿಶ್ವ ನಂ.1 ಆಟಗಾರ್ತಿಯ ಬಲವಾದ ಸರ್ವ್ಗಳ ಮುಂದೆ ಚೀನಾದ ಝೆಂಗ್ ನಿರುತ್ತರವಾದರು. ಒಂದೇ ಒಂದು ಡಬಲ್ ಫಾಲ್ಟ್ ಕೂಡ ಮಾಡಲಿಲ್ಲ. 67 ಪ್ರತಿಶತದಷ್ಟು ಸರ್ವ್‌ಗಳು ಯಶ ಕಂಡವು.