ಕರ್ನಾಟಕ

karnataka

ಏರ್​ ರಫೈಲ್​ ಸ್ಪರ್ಧೆ: ಫೈನಲ್​ಗೆ ಪ್ರವೇಶಿಸಿದ ಅರ್ಜುನ್​ ಬಾಬುತಾ - paris olympics 2024

By ETV Bharat Sports Team

Published : Jul 28, 2024, 6:22 PM IST

ಪುರುಷರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಸ್ಟಾರ್​ ಶೂಟರ್ ಅರ್ಜುನ್ ಬಾಬುತಾ ಫೈನಲ್​ಗೆ ಅರ್ಹತೆ ಪಡೆದಿದ್ದಾರೆ.

ಅರ್ಜುನ್​ ಬಾಬುತಾ
ಅರ್ಜುನ್​ ಬಾಬುತಾ (Getty Images)

ಪ್ಯಾರಿಸ್​:ಭಾರತದ ಸ್ಟಾರ್​ ಶೂಟರ್ ಅರ್ಜುನ್ ಬಾಬುತಾ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿ ಪುರುಷರ 10 ಮೀಟರ್ ಏರ್ ರೈಫಲ್ ಸಿಂಗಲ್ಸ್​ ಸ್ಪರ್ಧೆಯಲ್ಲಿ ಫೈನಲ್​ಗೆ ಪ್ರವೇಶಿಸಿದ್ದಾರೆ.

ಅರ್ಜುನ್ ಅರ್ಹತಾ ಸುತ್ತಿನಲ್ಲಿ 7ನೇ ಸ್ಥಾನ ಪಡೆಯುವ ಮೂಲಕ ಫೈನಲ್​ಗೆ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡರು. ಇದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮತ್ತೊಬ್ಬ ಭಾರತೀಯ ಶೂಟರ್​ ಸಂದೀಪ್ ಸಿಂಗ್ ಫೈನಲ್​ಗೆ ಅರ್ಹತೆ ಪಡೆಯವಲ್ಲಿ ವಿಫಲರಾದರು. ಅವರು ಅರ್ಹತಾ ಸುತ್ತಿನಲ್ಲಿ ಒಟ್ಟು 629.3 ಅಂಕಗಳೊಂದಿಗೆ 12ನೇ ಸ್ಥಾನಕ್ಕೆ ತಲುಪಿದರು.

ಪಂದ್ಯದಲ್ಲಿ ಉತ್ತಮ ಆರಂಭ ಪಡೆದಿದ್ದ ಅರ್ಜುನ್ ಬಾಬುತಾ, ಕ್ರಮವಾಗಿ 105.7, 104.9, 105.5, 105.4, 104.0 ಮತ್ತು 104.6 ಅಂಕಗಳೊಂದಿಗೆ ಒಟ್ಟು 630.1 ಅಂಕಗಳನ್ನು ಗಳಿಸಿ 7ನೇ ಸ್ಥಾನ ಪಡೆದರು. 629.3 ಅಂಕ ಪಡೆದಿದ್ದ ಸಂದೀಪ್ ಕೊನೆಯ ಸುತ್ತಿನಲ್ಲಿ ಪುನರಾಗಮನ ಮಾಡಲು ಪ್ರಯತ್ನಿಸಿದರಾದರೂ ಫೈನಲ್​ಗೆ ತಲುಪಲು ಸಾಧ್ಯವಾಗಲಿಲ್ಲ.

ಉತ್ತಮ ಆರಂಭವನ್ನು ಪಡೆದಿದ್ದ ಅರ್ಜುನ್​, ಮೊದಲ ಸುತ್ತಿನಲ್ಲಿ 10.8 ಅತ್ಯುತ್ತಮ ಸ್ಕೋರ್‌ನೊಂದಿಗೆ 105.7 ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ಎರಡನೇ ಸುತ್ತಿನಲ್ಲಿ ಒಟ್ಟು ಅಂಕಗಳಲ್ಲಿ ಕೊಂಚ ಇಳಿಕೆಯಾಗಿ ಅಗ್ರ 8ರಲ್ಲಿ ಉಳಿಯುವಲ್ಲಿ ಯಶಸ್ವಿಯಾದರು. ಮತ್ತೊಮ್ಮೆ ಮೂರನೇ ಸುತ್ತಿನಲ್ಲಿ 105.5 ಅಂಕಗಳೊಂದಿಗೆ ಮುನ್ನಡೆ ಸಾಧಿಸಿದರು ಮತ್ತು ಅವರ 29ನೇ ಶಾಟ್‌ನಲ್ಲಿ 10.9 ಅತ್ಯುತ್ತಮ ಸ್ಕೋರ್ ದಾಖಲಿಸಿದರು.

ನಾಲ್ಕನೇ ರೌಂಡಿನಲ್ಲೂ ತಮ್ಮ ವೇಗವನ್ನು ಕಾಯ್ದುಕೊಂಡ ಅವರು ಮೊದಲ ಎರಡು ಹೊಡೆತಗಳಲ್ಲಿ 10.8 ಮತ್ತು 10.9 ಅಂಕಗಳನ್ನು ಗಳಿಸಿದರು. ಆದಾಗ್ಯೂ, ಸರಣಿಯಲ್ಲಿನ ಉಳಿದ ಹೊಡೆತಗಳು ಅವರ ಉನ್ನತ ಗುಣಮಟ್ಟವನ್ನು ಹೊಂದಿರಲಿಲ್ಲ ಮತ್ತು ಅವರು ಶ್ರೇಯಾಂಕದಲ್ಲಿ 6ನೇ ಸ್ಥಾನಕ್ಕೆ ಕುಸಿದರು.

ಫೈನಲ್ ಪಂದ್ಯ:10 ಮೀಟರ್ ಪುರುಷರ ಏರ್​ ರೈಫಲ್​ನ ಫೈನಲ್​ ಪಂದ್ಯ ಸೋಮವಾರ ನಡೆಯಲಿದೆ. ಬಾಬುತಾ ಅವರ ಮೇಲೆ ಪದಕ ಗೆಲ್ಲುವ ನಿರೀಕ್ಷೆ ಹೆಚ್ಚಾಗಿದೆ. ಇದಕ್ಕೂ ಮೊದಲು, ಇಂದು ನಡೆದ ಮಹಿಳೆಯರ 10 ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಭಾರತದ ಶೂಟರ್ ರಮಿತಾ ಜಿಂದಾಲ್ ಐದನೇ ಸ್ಥಾನ ಪಡೆಯುವ ಮೂಲಕ ಫೈನಲ್‌ಗೆ ಪ್ರವೇಶ ಪಡೆದರು.

ಕಳೆದ ವರ್ಷ ನಡೆದ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ರಮಿತಾ ಒಟ್ಟು 631.5 ಅಂಕಗಳೊಂದಿಗೆ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಪಿಸ್ತೂಲ್ ಶೂಟರ್ ಮನು ಭಾಕರ್ ನಂತರ ಈ ಒಲಿಂಪಿಕ್​ನಲ್ಲಿ ಫೈನಲ್‌ನಲ್ಲಿ ಸ್ಥಾನ ಪಡೆದ ಭಾರತದ ಎರಡನೇ ಮಹಿಳಾ ಶೂಟರ್​ ಎನಿಸಿಕೊಂಡಿದ್ದಾರೆ.

ಇದೇ ಸ್ಪರ್ಧೆಯಲ್ಲಿ ಎಲವೆನಿಲ್ ವಲರಿವನ್ 10ನೇ ಸ್ಥಾನ ಪಡೆಯುವ ಮೂಲಕ ಫೈನಲ್​ಗೇರಲು ವಿಫಲರಾದರು. ಇದಕ್ಕೂ ಮೊದಲ ಇಂದು ನಡೆದ ಮಹಿಳಾ 10 ಮೀಟರ್​ ಏರ್​ ಪಿಸ್ತೂಲ್​ ಶೂಟಿಂಗ್​ ಪಂದ್ಯದಲ್ಲಿ ಭಾರತದ ಮನು ಭಾಕರ್ ಐತಿಹಾಸಿಕ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕವನ್ನು ತಂದುಕೊಟ್ಟಿದ್ದಾರೆ.

ಇದನ್ನೂ ಓದಿ:ಟೇಬಲ್​ ಟೆನಿಸ್​ನಲ್ಲಿ ಭಾರತಕ್ಕೆ ಹಿನ್ನಡೆ: ಒಲಿಂಪಿಕ್​​ನಿಂದ ಹೊರಬಿದ್ದ ಶರತ್​ ಕಮಲ್​ - Paris Olympics 2024

ABOUT THE AUTHOR

...view details