ಹಾವೇರಿ: ಅತ್ಯಂತ ಪ್ರೀತಿಯಿಂದ ಮನೆಯ ಸದಸ್ಯನಂತೆ ಸಾಕಿರುವ ಶ್ವಾನಕ್ಕೆ ಇಲ್ಲೊಂದು ಕುಟುಂಬ ಸೀಮಂತ ಕಾರ್ಯಕ್ರಮ ಮಾಡುವ ಮೂಲಕ ಗಮನ ಸೆಳೆದಿದೆ. ಹೌದು, ಹಾನಗಲ್ ತಾಲೂಕು ಅಕ್ಕಿಆಲೂರಿನ ಅಕ್ಕಿಆಲೂರ ಗ್ರಾಮದ ಟೋಪಿ ಅಜ್ಜನ ಮನೆಯ ಕರಬಸಪ್ಪ ಗೊಂದಿ ಕುಟುಂಬದವರು ತಾವು ಸಾಕಿರುವ ರಿಧಿ ಎಂಬ ಹೆಸರಿನ ನಾಯಿಗೆ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ.
ಶಾಸ್ತ್ರೋಕ್ತವಾಗಿ ಸೀಮಂತ: ಮುಂಜಾನೆ ರಿಧಿಗೆ ಸ್ನಾನ ಮಾಡಿಸಿ ಅದರ ಕಾಲುಗಳಿಗೆ ನೇಲ್ ಪಾಲಿಶ್ ಹಚ್ಚಿ. ಹೊಸ ಫ್ರಾಕ್ ತೊಡಿಸಿ ಮದುಮಗಳಂತೆ ಸಿಂಗಾರಗೊಳಿಸಲಾಗಿತ್ತು. ನಂತರ ನೆರೆಹೊರೆಯ ಮಹಿಳೆಯರು ಸೀಮಂತ ಕಾರ್ಯಕ್ರಮಕ್ಕೆ ಆಗಮಿಸಿ ರಿಧಿಗೆ ಕುಂಕುಮ ಅರಿಶಿಣ ಹಚ್ಚಿ ಆರತಿ ಬೆಳಗಿ, ಸೀರೆಯನ್ನು ರಿಧಿ ಮೇಲೆ ಹಾಕಿ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದರು.
ಇನ್ನು ಬೊಮ್ಮನಹಳ್ಳಿ ಗ್ರಾಮದ ಶ್ವಾನ ತರಬೇತುದಾರ ರಂಜಿತ್ ತಮ್ಮ ಶ್ವಾನ ಕಾಳಿಯನ್ನು ರಿಧಿ ಸೀಮಂತಕ್ಕೆ ಕರೆತಂದಿದ್ದರು ಈ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕಾಳಿ ಶ್ವಾನದಿಂದ ರಿಧಿ ಶ್ವಾನಕ್ಕೆ ಸೀರೆಯನ್ನು ನೀಡುವ ಮೂಲಕ ರಿಧಿ ಸೀಮಂತಕ್ಕೆ ಹಾರೈಸಿದರು. ಅಕ್ಕಪಕ್ಕದ ಶ್ವಾನಪ್ರೇಮಿಗಳೂ ಸಹ ತಮ್ಮ ಶ್ವಾನಗಳನ್ನು ರಿಧಿ ಸೀಮಂತಕ್ಕೆ ಕರೆತಂದಿದ್ದರು.
ಬೆರಗು ಮೂಡಿಸುವಂತಿತ್ತು ಸಿಂಗಾರ: ನಿಕ್ಕಿ ಮತ್ತು ಜ್ಯೂಲಿ ಶ್ವಾನಗಳನ್ನು ಸಹ ಸೀಮಂತ ಕಾರ್ಯಕ್ರಮಕ್ಕೆ ಸುಂದರವಾಗಿ ಸಿಂಗರಿಸಿ ಕರೆತರಲಾಗಿತ್ತು. ರಿಧಿ ಸಂಪೂರ್ಣ ಸಸ್ಯಹಾರಿಯಾಗಿದ್ದು ಸೀಮಂತ ಕಾರ್ಯಕ್ರಮದಲ್ಲಿ ಅದರ ನೆಚ್ಚಿನ ತಿನಿಸುಗಳಾದ ಚಕ್ಕಲಿ, ಶೇಂಗಾ ಚಕ್ಕಿ ಸೇರಿದಂತೆ ವಿವಿಧ ಆಹಾರಗಳನ್ನ ಇಡಲಾಗಿತ್ತು. ಸೀಮಂತ ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ರಿಧಿ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು. ಕರಿಬಸಪ್ಪ ಗೊಂದಿ ಅವರು ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗಿಡ ನೆಡುವ ಬಗ್ಗೆ ಜನರಲ್ಲಿ ಜಾಗೃತಿ: ಇನ್ನು ಕರಿಬಸಪ್ಪ ಗೊಂದಿ ವೃತ್ತಿಯಲ್ಲಿ ಕಾನ್ಸ್ಟೇಬಲ್ ಆಗಿದ್ದು, ರಕ್ತದಾನ, ನೇತ್ರದಾನ, ಗಿಡ ನೆಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಶ್ವಾನದ ಮಾಲೀಕ ಕರಿಬಸಪ್ಪ ಗೊಂದಿ ಮಾತನಾಡಿ, "ಷರತ್ತುಗಳಿಲ್ಲದೇ ಪ್ರೀತಿ ಮಾಡುವುದು ಪ್ರಾಣಿಗಳಿಂದ ಮಾತ್ರ ಸಿಗಲು ಸಾಧ್ಯ. ಹೀಗಾಗಿ ನಮ್ಮ ಟೋಪಿ ಅಜ್ಜನ ಮನೆಯಲ್ಲಿ ಸಾಕು ನಾಯಿ ರಿಧಿ ಸೀಮಂತ ಕಾರ್ಯಕ್ರ ಮಾಡುತ್ತಿದ್ದೇವೆ. ರಿಧಿ ನಮ್ಮ ಮನೆ ಬಂದು 1 ವರ್ಷ ನಾಲ್ಕು ತಿಂಗಳಾಗಿದೆ. ಏಪ್ರಿಲ್ನಲ್ಲಿ ಒಂದು ವರ್ಷದ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಮಾಡಿದ್ದೆವು. ನಮ್ಮ ಮನೆಯ ಸದಸ್ಯೆಯಾದ ರಿಧಿಯ ಸೀಮಂತವನ್ನು ನಾವೆಲ್ಲರೂ ಸೇರಿ ಮಾಡಿದ್ದೇವೆ" ಎಂದು ತಿಳಿಸಿದರು.
ಕರಿಬಸಪ್ಪ ಪತ್ನಿ ವನಿತಾ ಗೊಂದಿ ಮಾತನಾಡಿ, "ಇಂದು ರಿಧಿಯ ಸೀಮಂತ ಕಾರ್ಯಕ್ರಮ ಮಾಡಿದ್ದೇವೆ. ರಿಧಿ ನಮ್ಮ ಮನೆಗೆ ಬಂದಾಗಿನಿಂದ ಸಂತಸ ಮನೆ ಮಾಡಿದೆ. ರಿಧಿ ಎಲ್ಲರೊಂದಿಗೆ ಹೊಂದಿಕೊಂಡು ಆಟವಾಡಿಕೊಂಡು ಇದ್ದಾಳೆ. ಇಂದು ರಿಧಿಗೆ ಹೊಸ ಫ್ರಾಕ್, ನೆಕ್ಲೆಸ್ ತೊಡಿಸಿ. ಅವಳಿಗೆ ಹಣ್ಣುಗಳೆಂದರೆ ತುಂಬಾ ಇಷ್ಟ ಹೀಗಾಗಿ ಅವಳಿಗೋಸ್ಕರ ಹಣ್ಣುಗಳನ್ನು ತಂದಿಟ್ಟು ಸೀಮಂತ ಕಾರ್ಯಕ್ರಮ ನೆರವೇರಿಸಿದ್ದೇವೆ" ಎಂದು ಹೇಳಿದರು.
ಇದನ್ನೂ ಓದಿ: ಹುಬ್ಬಳ್ಳಿ: ಒಂದೂವರೆ ದಶಕದಿಂದ ಸೇವೆ ನೀಡಿದ ಬಸ್ಗೆ ಗ್ರಾಮಸ್ಥರಿಂದ ಅದ್ಧೂರಿ ಬೀಳ್ಕೊಡುಗೆ - farewell to sarige bus