ಹೈದರಾಬಾದ್:ಇಂದುಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿಆರಂಭವಾಗಲಿದೆ. ಈ ಪಂದ್ಯಕ್ಕೂ ಮುನ್ನ ಭಾರತ ತಂಡದ ಮಾಜಿ ಸ್ಟಾರ್ ಬೌಲರ್ ಅನಿಲ್ ಕುಂಬ್ಳೆ, ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು 'ಅನನುಭವಿ' ಎಂದು ವಿಶ್ಲೇಷಿಸಿದ್ದಾರೆ. 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆತಿಥೇಯರು 4-1ರಿಂದ ಸುಲಭವಾಗಿ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇಂಗ್ಲೆಂಡ್ ಮೊದಲ ಟೆಸ್ಟ್ಗೆ ಮೂರು ಸ್ಪಿನ್ನರ್‌ಗಳಾದ ಜಾಕ್ ಲೀಚ್, ಟಾಮ್ ಹಾರ್ಟ್ಲಿ, ರೆಹಾನ್ ಅಹ್ಮದ್ ಮತ್ತು ಏಕೈಕ ವೇಗದ ಬೌಲರ್ ಮಾರ್ಕ್ ವುಡ್ ಅವರನ್ನು ಆಯ್ಕೆ ಮಾಡಿದೆ.
ಬುಧವಾರ 'ಜಿಯೋಸಿನಿಮಾ' ಆಯೋಜಿಸಿದ್ದ ಸಂವಾದದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅನಿಲ್ ಕುಂಬ್ಳೆ ಉತ್ತರಿಸಿದರು. ಭಾರತೀಯ ಪಿಚ್ನಲ್ಲಿ ಪ್ರವಾಸಿ ತಂಡ ಹೇಗೆ ಬೌಲಿಂಗ್ ಮಾಡುತ್ತದೆ ಎಂಬುದರ ಬಗ್ಗೆ ಸಾಕಷ್ಟು ಕುತೂಹಲವಿದೆ. ಅನನುಭವಿ ಸ್ಪಿನ್ ವಿಭಾಗವನ್ನು ಜಾಕ್ ಲೀಚ್ ಹೇಗೆ ಮುನ್ನಡೆಸುವರು ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಖಂಡಿತವಾಗಿಯೂ ಇಂಗ್ಲೆಂಡ್ ತಂಡ ಪಿಚ್ ಹೇಗಿದೆ ಅನ್ನೋದನ್ನು ನೋಡಿರುತ್ತದೆ. ಚೆಂಡು ತಿರುಗುವ ಸಾಧ್ಯತೆಯ ಕಾರಣಕ್ಕೆ ಅವರು ಓರ್ವ ವೇಗದ ಬೌಲರ್ ಅನ್ನು ಮಾತ್ರ ಆಡಿಸುತ್ತಿದ್ದಾರೆ ಎಂದರು.
ಯುವ ಆಟಗಾರ ಹ್ಯಾರಿ ಬ್ರೂಕ್ ಅನುಪಸ್ಥಿತಿಯಲ್ಲಿ ಜಾನಿ ಬೈರ್‌ಸ್ಟೋವ್ ವಿಕೆಟ್‌ಕೀಪರ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ತಂಡದಲ್ಲಿ ಮತ್ತೊಬ್ಬ ವೇಗದ ಬೌಲರ್‌ಗೆ ಅವಕಾಶ ನೀಡಬಹುದು ಎಂದು ನಾನು ಭಾವಿಸಿದ್ದೇನೆ. ಭಾರತದೆದುರು ಇಂಗ್ಲೆಂಡ್ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದನ್ನು ನೋಡಲು ನಾನು ಕಾತುರನಾಗಿದ್ದೇನೆ. ತಂಡದ ನಾಯಕ ಬೆನ್ ಸ್ಟೋಕ್ಸ್ ಹೊರೆತುಪಡಿಸಿದರೆ ತಂಡವು ಕೇವಲ ಒಬ್ಬ ವೇಗದ ಬೌಲರ್ ಹೊಂದಿದೆ. ಬೆನ್ ಸ್ಟೋಕ್ಸ್ ಎಷ್ಟು ಓವರ್ ಬೌಲಿಂಗ್ ಮಾಡುತ್ತಾರೆ ಎಂಬುದು ನಮಗೆ ತಿಳಿದಿಲ್ಲ. ಮೊದಲ ಟೆಸ್ಟ್‌ನಲ್ಲಿ ಸ್ಟೋಕ್ಸ್ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಗಮನಿಸಬೇಕಿದೆ ಎಂದು ಕುಂಬ್ಳೆ ಅಭಿಪ್ರಾಯಪಟ್ಟರು.
ಈ ಸರಣಿ ಯುವ ಸ್ಪಿನ್ನರ್‌ಗಳಾದ ಹಾರ್ಟ್ಲಿ ಮತ್ತು ಅಹ್ಮದ್ ಅವರಂತಹ ಆಟಗಾರರಿಗೆ ಸವಾಲು. ಏಕೆಂದರೆ ಬಲಿಷ್ಠ ಭಾರತದ ಬ್ಯಾಟಿಂಗ್ ಲೈನ್‌ಅಪ್ ಮೇಲೆ ರೆಹಾನ್ ಮತ್ತು ಹಾರ್ಟ್ಲೆ ಒತ್ತಡ ಹೇರುವುದು ಅಷ್ಟು ಸುಲಭದ ಮಾತಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ತಂಡಗಳ ಪ್ರದರ್ಶನ ಗಮನಿಸಿದರೆ ಐದು ಟೆಸ್ಟ್‌ಗಳಲ್ಲಿ ಖಂಡಿತವಾಗಿಯೂ ಫಲಿತಾಂಶ ಬರುವ ಸಾಧ್ಯತೆ ಇದೆ. ಭಾರತ ಸರಣಿ ಗೆಲ್ಲುತ್ತದೆ ಎಂದು ಭಾವಿಸುತ್ತೇನೆ ಎಂದು ಅನಿಲ್ ಕುಂಬ್ಳೆ ಹೇಳಿದರು.
ಇದನ್ನೂ ಓದಿ:ಇಂಗ್ಲೆಂಡ್ ಕ್ರಿಕೆಟರ್ ಬಶೀರ್ಗೆ ಕೊನೆಗೂ ಸಿಕ್ಕ ವೀಸಾ: ಆದರೂ ಮೊದಲ ಟೆಸ್ಟ್ನಿಂದ ಔಟ್