ಹೈದರಾಬಾದ್:ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ ಸಾರ್ವಕಾಲಿಕ ತಮ್ಮ ನೆಚ್ಚಿನ ಇಂಡಿಯನ್ ಪ್ರೀಮಿಯರ್ ಲೀಗ್ ಪ್ಲೇಯಿಂಗ್ XI ತಂಡವನ್ನು ಹೆಸರಿಸಿದ್ದಾರೆ. ಅನುಭವಿ ಸ್ಪಿನ್ನರ್ ತಮ್ಮ ತಂಡದಲ್ಲಿ ಕ್ರಿಸ್ ಗೇಲ್, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಕೀರಾನ್ ಪೊಲಾರ್ಡ್‌ನಂತಹ ಸ್ಫೋಟಕ ಬ್ಯಾಟರ್ಗಳನ್ನು ಕೈಬಿಟ್ಟಿದ್ದಾರೆ. ಆದಾಗ್ಯೂ, ಅವರು ಆಯ್ಕೆ ಮಾಡಿದ ತಂಡದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಇಬ್ಬರು ಮತ್ತು ಮುಂಬೈ ಇಂಡಿಯನ್ಸ್ (MI)ನ ನಾಲ್ವರು ಆಟಗಾರರು ಸೇರಿದಂತೆ ಒಟ್ಟು 7 ಭಾರತೀಯರನ್ನು ಆಯ್ಕೆ ಮಾಡಿದ್ದು, ನಾಲ್ವರು ವಿದೇಶಿ ಆಟಗಾರರಿಗೆ ತಮ್ಮ ತಂಡದಲ್ಲಿ ಸ್ಥಾನ ನೀಡಿದ್ದಾರೆ.
1983ರ ವಿಶ್ವಕಪ್ ವಿಜೇತ ಭಾರತ ತಂಡದ ಮಾಜಿ ಆಟಗಾರ ಕೃಷ್ಣಮಾಚಾರಿ ಅವರ ಯೂಟ್ಯೂಬ್ ಚಾನಲ್‌ನಲ್ಲಿ ಮಾತನಾಡಿದ ಅಶ್ವಿನ್ ತಮ್ಮ ಸಾರ್ವಕಾಲಿಕ ಐಪಿಎಲ್-11 ತಂಡವನ್ನು ಆಯ್ಕೆ ಮಾಡಿದ್ದಾರೆ. ಅದರಲ್ಲಿ 5 ಬಾರಿ ಐಪಿಎಲ್ ವಿಜೇತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಆರಂಭಿಕ ಬ್ಯಾಟರ್ಗಳಾಗಿ ಆಯ್ಕೆ ಮಾಡಿದ್ದು, ವಾರ್ನರ್ ಮತ್ತು ಕ್ರಿಸ್ಗೇಲ್ ಅವರನ್ನು ಓಪನರ್ಗಳಾಗಿ ಕೈ ಬಿಟ್ಟಿದ್ದಾರೆ.
ಬಳಿಕ ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಮತ್ತು ಭಾರತದ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮೂರು ಮತ್ತು ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ರನ್ನು ಮಧ್ಯಮ ಕ್ರಮಾಂಕದಲ್ಲಿರಿಸಿದ್ದಾರೆ. ಧೋನಿ ಅವರನ್ನು ಸಾರ್ವಕಾಲಿಕ XI ತಂಡದ ವಿಕೆಟ್ ಕೀಪರ್ ಮತ್ತು ನಾಯಕನಾಗಿ ಆಯ್ಕೆ ಮಾಡಿದ್ದಾರೆ.