ತರೌಬಾ (ಟ್ರಿನಿಡಾಡ್ ಮತ್ತು ಟೊಬಾಗೊ):ವೇಗಿ ಫಜಲ್ಹಾಕ್ ಫಾರೂಕಿ ಅವರ ಅಮೋಘ ಮೂರು ವಿಕೆಟ್ ಗೊಂಚಲು ಮತ್ತು ಗುಲ್ಬದಿನ್ ನೈಬ್ ಅವರ ಉತ್ತಮ ಪ್ರದರ್ಶನ ಫಲವಾಗಿ ಅಫ್ಘಾನಿಸ್ತಾನವು ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ಶುಕ್ರವಾರ ನಡೆದ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಪುವಾ ನ್ಯೂಗಿನಿಯಾ ತಂಡದ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ ಮೂರು ಪಂದ್ಯಗಳಲ್ಲಿ ಮೂರು ಗೆಲುವು ಸಾಧಿಸಿದೆ.
'ಸಿ' ಗುಂಪಿನಲ್ಲಿ ವೆಸ್ಟ್ ಇಂಡೀಸ್ ಜೊತೆಗೆ ಆಫ್ಘನ್ ಕೂಡ ಸೂಪರ್ 8 ಸುತ್ತಿಗೆ ಪ್ರವೇಶ ಪಡೆಯಿತು. ಇದುವರೆಗೆ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಸೋತಿರುವ ನ್ಯೂಜಿಲೆಂಡ್, ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಇದರ ಜೊತೆಗೆ 'ಸಿ' ಗುಂಪಿನಿಂದ ಪಪುವಾ ನ್ಯೂಗಿನಿಯಾ ಮತ್ತು ಉಗಾಂಡ ತಂಡಗಳು ಕೂಡ ಹೊರಬಿದ್ದಂತಾಯಿತು.
ಆಫ್ಘನ್ ಎದುರು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಪುವಾ, 19.5 ಓವರ್‌ಗಳಲ್ಲಿ 95 ರನ್‌ಗಳಿಗೆ ಆಲೌಟ್ ಆಯಿತು. ಪಪುವಾ ನ್ಯೂಗಿನಿ ತಂಡದ ವಿಕೀಟ್ ಕೀಪರ್ ಕಿಪ್ಲಿನ್ ಡೋರಿಗಾ 32 ಎಸೆತಗಳಲ್ಲಿ 2 ಬೌಂಡರಿಗಳ ಸಹಾಯದಿಂದ 27 ರನ್ ಗಳಿಸಿ ಗರಿಷ್ಠ ಸ್ಕೋರರ್ ಆದರು. ಇವರಲ್ಲದೇ ಎಲಿ ನೌ 19 ಎಸೆತಗಳಲ್ಲಿ 2 ಬೌಂಡರಿ ಸಹಿತ 13 ರನ್ ಹಾಗೂ ಟೋನಿ ಉರಾ 18 ಎಸೆತಗಳಲ್ಲಿ 1 ಬೌಂಡರಿ ಸಹಿತ 11 ರನ್ ಗಳಿಸಿದರು. ಈ ಬ್ಯಾಟರ್‌ಗಳ ರನ್‌ಗಳಿಂದಾಗಿ ಪಪುವಾ ನ್ಯೂಗಿನಿ 95 ರನ್‌ಗಳಿಗೆ ತಲುಪಲು ಸಾಧ್ಯವಾಯಿತು. ಉಳಿದಂತೆ ಲೆಗಾ ಸಿಯಾಕಾ, ಸೆಸೆ ಬೌ ಮತ್ತು ನಾರ್ಮನ್ ವನುವಾ ಸೊನ್ನೆ ಸುತ್ತಿದರು. ಆಫ್ಘನ್ ಪರ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿದ ಫಜಲ್ಹಕ್ ಫಾರೂಕಿ 3 ವಿಕೆಟ್ ಪಡೆದರೆ, ನವೀನ್ ಉಲ್ ಹಕ್ 2 ಹಾಗೂ ನೂರ್ ಅಹ್ಮದ್ 1 ವಿಕೆಟ್ ಪಡೆದರು. ಈ ಪಂದ್ಯ ಪಪುವಾ ನ್ಯೂಗಿನಿಯಾ ತಂಡದ 4 ಬ್ಯಾಟರ್ ರನೌಟ್ ಆದರು.